ಕುಶಾಲನಗರ, ನ 18: ಆ ವಯಸ್ಸೇ ಅಂತಹದ್ದು. ಆ ಹದಿ ಹರೆಯದ ವ್ಯಾಸಾಂಗದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಪ್ರಣಯಕ್ಕೆ ಜೋತು ಬಿದ್ದು ಜೀವನವನ್ನು ಬರಿದಾಗಿಸಿಕೊಂಡ ಕಥೆ, ಸುಂದರ ಬದುಕನ್ನು ಬಾಳಬೇಕೆಂದು ಹೆಣ್ಣುಮಗಳೊಬ್ಬಳು ಕಟ್ಟಿದ್ದ ಕನಸು ಬರಿದಾದ ವ್ಯಥೆಯ ಕಥೆ.
ಕುಶಾಲನಗರ ಸಮೀಪದ ಗ್ರಾಮವೊಂದರ ಕೃಷಿಕರೊಬ್ಬರ ಮಗಳು ತಾನು ಪದವಿ ವ್ಯಾಸಾಂಗ ಮಾಡುತ್ತಿದ್ದ ಸಂದರ್ಭ ತನ್ನ ಸಹಪಾಠಿಯಾಗಿದ್ದ ಅನ್ಯಜಾತಿಯ ಹುಡುಗನೊಬ್ಬನ ಜೊತೆ ಪ್ರೇಮಾಂಕುರವಾಗುತ್ತದೆ.
ಆ ಪ್ರೇಮಾಂಕುರ ಎಲ್ಲಿಯವರೆಗೆ ತಲುಪುತ್ತದೆ ಎಂದರೆ ಇಬ್ಬರು ವಿವಾಹವಾಗುವ ಹಂತದವರೆಗು ತಲುಪುತ್ತದೆ.
ಕೊನೆಗೆ ಅನ್ಯ ಜಾತಿಯ ಈ ಇಬ್ಬರ ವಿವಾಹಕ್ಕೆ ವಿದ್ಯಾರ್ಥಿನಿಯ ಪೋಷಕರು
ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆ ಇಬ್ಬರು ದೂರದ ಊರೊಂದಕ್ಕೆ ತೆರಳಿ ದೇಗುಲವೊಂದರಲ್ಲಿ ವಿವಾಹ ವಾಗುತ್ತಾರೆ.
ಆದರೆ, ವಿರೋಧದ ನಡುವೆಯೂ ಬಹಳಷ್ಟು ಜತನದಿಂದ ಹಾಗೂ ಜೋಪಾನದಿಂದ ಗಿಳಿಯಂತೆ ಮುದ್ದು ಮುದ್ದಾಗಿ ಸಾಕಿದ ಮಗಳು ಅನ್ಯ ಜಾತಿಯ ಹುಡುಗನ ಜೊತೆ ಓಡಿ ಹೋಗಿ ವಿವಾಹ ಮಾಡಿಕೊಂಡ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೊಡನೆ ಹುಡುಗಿಯ ತಾಯಿ ಗೋಳಿಡುತ್ತಾರೆ. ಘೀಳಿಡುತ್ತಾರೆ.
ಆದರೆ ನಿಶ್ಚಯ ಮಾಡಿ ಮನೆ ತೊರೆದು ಓಡಿ ಹೋಗಿದ್ದ ಮಗಳು ನನಗೆ ನನ್ನ ಗಂಡನೇ ಮುಖ್ಯ ಹೊರತು ಬೇರೆ ಯಾರೂ ಕೂಡ ಅಲ್ಲ ಎಂದು ಮೊಬೈಲ್ ನಲ್ಲಿ ವಾಯ್ಸ್ ಸಂದೇಶ ಕಳಿಸಿದ್ದು ಮೊದಲೇ ಬಹಳಷ್ಟು ನೊಂದು ಬೆಂದಿದ್ದ ತಾಯಿ ಹೃದಯಕ್ಕೆ ಬರಸಿಡಿಲಿನಂತೆ ಬಡಿಯುತ್ತದೆ.
ಕೊನೆಗೆ ದಿನಗಳು, ವರ್ಷಗಳು ಕಳೆದಂತೆ ಆ ತಾಯಿ ಆ ಮಗಳ ಗುಂಗಿನಿಂದ ಒಂದಷ್ಟು ಹೊರಬರುತ್ತಾರೆ.
ಆದರೆ, ಆರಂಭದಲ್ಲಿ ಸಹಜವಾದ ವಯಸ್ಸಿನ ಹಾಗೂ ಕುರುಡು ಪ್ರೇಮ ತುಂಬಿದ ಕಂಗಳಲ್ಲಿ ಆ ವಿದ್ಯಾರ್ಥಿನಿಗೆ ಕಾಣದಾದ ಪೋಷಕರು ವಿವಾಹವಾದ ಕೆಲ ವರ್ಷಗಳ ನಂತರ ನೆನಪಾಗುತ್ತಾರೆ.
ಕ್ರಮೇಣ ಆ ವಿವಾಹಿತೆ ಗರ್ಭವತಿಯಾದ ಮೇಲಂತೂ ತನ್ನ ತಪ್ಪಿನಿಂದಾಗಿ ಬಹಳ ದೂರವಾಗಿದ್ದ ತನ್ನ ಹೆತ್ತೊಡಲು ( ತಾಯಿ ) ಬಹಳಷ್ಟು ನೆನಪಾಗುತ್ತಾರೆ.
ಅಮ್ಮನನ್ನು ನೋಡಬೇಕೆಂಬ ಹಂಬಲದಿಂದ ಬಹಳಷ್ಟು ಮನನೊಂದು ಪರಿತಪಿಸುತ್ತಾಳೆ.
ಆದರೆ, ಹದಿನೆಂಟು ವರ್ಷಗಳ ಕಾಲ ಅಪಾರ ತ್ರಾಸದಿಂದ ಹೊತ್ತು ಹೆತ್ತು ಮುದ್ದಾಡಿ ಸಾಕಿದಂತಹ ಮಗಳು ದಾರಿ ತಪ್ಪಿದ್ದರಿಂದ ಮಾನಸಿಕವಾಗಿ ದೂರ ಸಾಗಿದ್ದ ಆ ತಾಯಿ ಮಗಳಿದ್ದಾಳೆ ಎಂಬುದನ್ನೇ ಮರೆತು ಹೋಗುತ್ತಾರೆ.
ಆಂದರೆ, ಸೌಜನ್ಯಕ್ಕೂ ಮಗಳನ್ನು ನೋಡುವ ಅಥವಾ ಮಾತನಾಡಿಸುವ, ಅವಳ ಆರೋಗ್ಯವನ್ನು ವಿಚಾರಿಸುವ ಯಾವುದೇ ಗೋಜಿಗೆ ಆ ತಾಯಿ ಹೋಗುವುದೇ ಇಲ್ಲ.
ಮಗಳು ತುಂಬು ಗರ್ಭವತಿಯಾದ ಬಳಿಕ ಆದದ್ದು ಆಗಿ ಹೋಗಿದೆ.
ಮಗಳು ಎಂಬ ಕಾರಣಕ್ಕೆ ಎಲ್ಲವನ್ನು ಮರೆತು ಮಗಳನ್ನು ಮನೆಗೆ ಕರೆ ತಂದು ಚೊಚ್ಚಲ ಆರೈಕೆ ಮಾಡುವಂತೆ ಮತ್ತು ತಾಯಿಯ ಪ್ರೀತಿಯನ್ನು ನೀಡುವಂತೆ ಆಕೆಯ ತಾಯಿಗೆ ಹಲವಾರು ಮಂದಿ ಸಲಹೆ ನೀಡಿದರೂ ಕೂಡ ಹಟಕ್ಕೆ ಬಿದ್ದ ಆ ತಾಯಿ ಒಂಭತ್ತು ತಿಂಗಳ ತುಂಬು ಗರ್ಭಿಣಿಯಾದ ಆ ಮಗಳ ಮೇಲೆ ಮಮಕಾರ ತೋರದೇ ಇದ್ದುದು ಸಹಜವಾಗಿಯೇ ತುಂಬು ಗರ್ಭವತಿಯಾಗಿದ್ದ ಆ ಮಗಳಿಗೆ ತಡೆಯಲಾರದ ನೋವು, ಸಂಕಟ, ದುಗುಡ ಎಲ್ಲವನ್ನು ಉಂಟುಮಾಡುತ್ತದೆ.
ಹಾಗಾಗಿ ಗಂಡನ ಮನೆಯ ಆತನ ಪೋಷಕರಿಂದಲೂ ದೂರವಾಗಿ ಗಂಡನ ಜೊತೆ ಪ್ರತ್ಯೇಕ ಮನೆಯಲ್ಲಿ ವಾಸವಿದ್ದ ಆ ಗರ್ಭವತಿ 23 ರ ಪ್ರಾಯದ ಹೆಣ್ಣು ಜೀವ
ತನ್ನ ಗಂಡ ಮನೆಯಲ್ಲಿ ಇಲ್ಲದ ಸಂದರ್ಭ ಒಬ್ಬಳೇ ಮನೆಯಲ್ಲಿ ಇದ್ದಾಗ ಮೂರ್ಛೆ ಬಂದಂತೆ ಪ್ರಜ್ಞೆ ತಪ್ಪಿ ಮನೆಯೊಳಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಾಳೆ. ಕೊನೆಗೆ ಮನೆಗೆ ಬಂದ ಗಂಡ ತನ್ನ ಪ್ರೀತಿಯ ಮಡದಿಯ ಸ್ಥಿತಿಯನ್ನು ಕಂಡು ಆಘಾತಗೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಾನಾದರೂ ಚಿಕಿತ್ಸೆ ಫಲಿಸದೇ ಗರ್ಭವತಿ ಈ ಬಡ ಜೀವ ತನ್ನೊಡಲಲ್ಲಿನ ಗಂಡು ಮಗುವಿನೊಂದಿಗೆ ಕೊನೆಯುಸಿರೆಳೆಯುತ್ತದೆ.
ಬಳಿಕ ತಾನು ಪ್ರೀತಿಸಿದಾಕೆಯ ಅಗಲಿಕೆಯನ್ನು ತಡೆಯಲಾರದೇ ಆತನೂ ಮರಣಿಸಲು ವಿಷ ಸೇವಿಸಿ ಇದೀಗ ಮಡಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆರೋಗ್ಯ ಶಿಕ್ಷಣಾಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರ ಬಳಿ ಈಕೆಯ ಸಾವಿಗೆ ಸಂಬಂಧಿಸಿದ ಕಾರಣ ಕೇಳಿದಾಗ, ಯಾವುದೇ ಹೆಣ್ಣು ಮಗಳು ಗರ್ಭವತಿಯಾದ ಸಂದರ್ಭ ಅವಳಿಗೆ ಅನೇಕ ಬಯಕೆಗಳು ಅವ್ಯಕ್ತವಾಗಿ ಕಾಡುತ್ತವೆ.
ತುಂಬು ಗರ್ಭಿಣಿಯಾದ ಸಂದರ್ಭವಂತೂ ಮನೆಯಲ್ಲಿ ಒಬ್ಬಳೇ ಇರುವುದು ಕ್ಷೇಮವಲ್ಲ. ಜೊತೆಯಲ್ಲಿ ಯಾರನ್ನಾದರೂ ಇರಿಸಿಕೊಳ್ಳಿ ಎಂಬ ಮಾಹಿತಿಯನ್ನು ನೀಡಿದ್ದೆವು.
ಆದರೆ, ಆಕೆ ಅಲ್ಲೇ ಅಂಗಡಿಯೊಂದರಲ್ಲಿ ಇದ್ದ ಗಂಡನ ಜೊತೆ ಒಬ್ಬಳೇ ಇದ್ದಳು.
ದುರಾದೃಷ್ಟವಶಾತ್ ಗಂಡ ಮನೆಯಿಂದ ಹೊರತೆರಳಿದ ಸಂದರ್ಭ ಮೂರ್ಚೆಗೊಂಡು ಬಿದ್ದು ನೋವುಂಡು ಸಾವನ್ನಪ್ಪಿರುತ್ತಾರೆ.
ಆಕೆ ಮೂರ್ಚೆಯಿಂದ ಬಿದ್ದ ಕೆಲವೇ ಸಮಯದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದರೆ ಬದುಕುಳಿವ ಸಾಧ್ಯತೆ ಇತ್ತು ಎಂದು ಮಾಹಿತಿ ನೀಡುತ್ತಾರೆ.
ಒಟ್ಟಾರೆ, ಇಲ್ಲಿ ಅಮಾಯಕ ಜೀವವೊಂದು ತೀವ್ರ ನಿರ್ಲಕ್ಷ್ಯದಿಂದ ಬಲಿಯಾಗಿದ್ದು ಮಾತ್ರ ವಿಷಾದನೀಯ.
ಇಲ್ಲಿ ಅನ್ಯ ಜಾತಿಯ ಹುಡುಗನ ಜೊತೆ ಹೋದವಳು ಎಂದು ಹಟಕ್ಕೆ ಬಿದ್ದ ಆಕೆಯ ತಾಯಿ ಮಾಡಿದ ನಿರ್ಲಕ್ಯ್ಯವೋ….ಆರೋಗ್ಯಾಧಿಕಾರಿಗಳು ಆಶಾ ಕಾರ್ಯಕರ್ತರು ನೀಡಿದ ಸಲಹೆಯನ್ನು ಪಾಲಿಸದೇ ತೋರಿದ ನಿರ್ಲಕ್ಷ್ಯವೋ…
ಅಥವಾ ಇನ್ನಾವ ಕಾರಣವೋ ತಿಳಿಯದು…
ಪ್ರೀತಿಯೇ ಸರ್ವಸ್ವ ಎಂದು ಹೆತ್ತವರನ್ನು ಕಡೆಗಣಿಸಿ ಓಡಿ ಹೋಗಿ ಸುಂದರ ಬದುಕು ಕಟ್ಟಬೇಕೆಂಬ ಅಮಾಯಕ ಜೀವ ಶವವಾಗಿದ್ದು ಮಾತ್ರ ದುರಂತ…..!
(ವಿಶೇಷ ಲೇಖನ : ಕೆ.ಎಸ್.ಮೂರ್ತಿ)
Back to top button
error: Content is protected !!