ಕುಶಾಲನಗರ ನ 12 : ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಹೆಚ್ಚಿನ ಒತ್ತು ನೀಡುವ ಮೂಲಕ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಕಲಿಸಬೇಕೆಂದು ಕೊಡಗು ಜಿಲ್ಲಾ ಮಲೆಯಾಳಿ ಸಮಾಜದ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ.ವಿಜಯ್ ಕರೆಕೊಟ್ಟರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲೆಯಾಳಿ ಸಮಾಜದ ವತಿಯಿಂದ ಕಾನ್ ಬೈಲ್ ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎರಡನೇ ವರ್ಷದ ಓಣಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಮೊಬೈಲ್ ಗಳಿಂದ ದೂರವಿರಿಸಿ ಗುರು ಹಿರಿಯರಿಗೆ ಗೌರವ ನೀಡುವ, ಸತ್ಕರಿಸುವಂತಹ ಸತ್ಪ್ರಜೆಗಳಾಗಿ ರೂಪಿಸಬೇಕಿದೆ.
ಎಲ್ಲಿ ನೋಡಿದರೂ ಕೂಡ ಮಕ್ಕಳು ಮೊಬೈಲ್ ನಲ್ಲಿ ಮಗ್ನರಾಗುತ್ತಾ ತಮ್ಮ ಎದುರು ಯಾರೇ ಹಿರಿಯರು ಬಂದರೂ ಕೂಡ ಗೌರವ ನೀಡದಂತಹ ಕೆಟ್ಟ ಮನಸ್ಥಿತಿಗೆ ಒಳಗಾಗುತ್ತಿರುವುದರಿಂದ ಪೋಷಕರು ಈ ಬಗ್ಗೆ ಎಚ್ಚರ ವಹಿಸಿ ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕಲಿಸಲು ವಿಜಯ್ ಕರೆಕೊಟ್ಟರು.
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿದರೆ ಸಾಲದು. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ವಿಜಯ್ ಕರೆಕೊಟ್ಟರು.
ಜಿಲ್ಲೆಯಲ್ಲಿ 14 ಕಡೆಗಳಲ್ಲಿ ಮಲೆಯಾಳಿ ಸಮಾಜಗಳಿವೆ. ಜಿಲ್ಲೆಯಾದ್ಯಂತ ಇನ್ನೂ ಕೂಡ ಹಲವೆಡೆಗಳಲ್ಲಿ ರಚನೆಯಾಗಬೇಕಾಗಿದೆ.
ಹಿಂದೂಗಳು ನಾವೆಲ್ಲಾ ಒಂದಾಗಲೇ ಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ.
ಸಮಾಜದ ರೋಗಗ್ರಸ್ಥ ಹಾಗೂ ಧರ್ಮದ್ರೋಹಿಗಳು ಮಾಡುತ್ತಿರುವ ಕುತಂತ್ರ ಹಾಗೂ ಕುಕೃತ್ಯಗಳ ಬಗ್ಗೆ ನಾವು ಎಚ್ಚರ ವಹಿಸದಿದ್ದಲ್ಲಿ ಹಿಂದೂಗಳಿಗೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ ಎಂದು ವಿಜಯ್ ಮಾರ್ಮಿಕವಾಗಿ ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ( ಪ್ರಭಾರ ) ಮಂಜೇಶ್ ಮಾತನಾಡಿ, ಮಲೆಯಾಳಿ ಬಾಂಧವರು ಕೊಡಗಿನ ಎಲ್ಲಾ ಜನರೊಂದಿಗೆ ಸಾಮರಸ್ಯದೊಂದಿಗೆ ಉತ್ತಮ ಬದುಕು ಕಟ್ಟಿಕೊಂಡು ಸನಾತನ ಸಂಸ್ಕ್ರತಿಯನ್ನು ಸಂರಕ್ಷಣೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಕಾನ್ ಬೈಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಂದೋಡಿ ಜಗನ್ನಾಥ್ ಮಾತನಾಡಿ, ಮಾರಕ ವಾದ ಮೊಬೈಲ್ ಗಳಿಂದಾಗಿ ಇಂದು ಮಕ್ಕಳು ಸಂಪ್ರದಾಯಗಳನ್ನು ಮರೆಯುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಓಣಂ ಆಚರಣೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಎಲ್ಲರ ಕಣ್ತೆರೆಸುತ್ತವೆ ಎಂದರು.
ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಕೆ. ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು.
ಓಣಂ ಆಚರಣೆ ಅಂಗವಾಗಿ ಮಹಿಳೆಯರಿಗೆ ಪೂಕಳಂ ಸ್ಪರ್ಧೆ ಹಾಗೂ ಮಕ್ಕಳಿಗೆ ನೃತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾನ್ ಬೈಲ್ ಗ್ರಾಮ ಪಂಚಾಯಿತಿ ಪಿಡಿಒ ಗೂಳಪ್ಪ ಕೂತಿನ, ನಾಕೂರು ಕೊಡವ ಕೂಟದ ಅಧ್ಯಕ್ಷ ಕಾಯಪಂಡ ಎ.ಕಾರ್ಯಪ್ಪ, ಕಾಫಿ ಬೆಳೆಗಾರ ಕೆ.ಎಸ್.ಸುರೇಶ್, ಕರವಂಡ ಕುಂಞಪ್ಪ, ನಾಕೂರು ಗಂಗಾಧರೇಶ್ವರ ದೇವಾಲಯದ ಅಧ್ಯಕ್ಷ ಎಲ್.ಎಂ.ರುದ್ರೇಶ್, ನಾಕೂರು ಯೂತ್ ಕ್ಲಬ್ ಅಧ್ಯಕ್ಷ ಎ.ಟಿ.ಚಂದ್ರಶೇಖರ್, ಸೋಮವಾರಪೇಟೆ ತಾಲ್ಲೂಕು ಮಲೆಯಾಳಿ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಡಿ.ಪ್ರಕಾಶ್, ಚೋಮಣಿ, ರಂಜಿನಿ, ಸಜಿ, ವಿ.ಕೆ.ವಿಜಯಕುಮಾರ್, ಬಿ.ಜಿ.ರಮೇಶ್, ಮೊದಲಾದವರಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆಲ್ಲರಿಗೂ ಕೇರಳದ ವಿಶೇಷ ಅಡುಗೆಯವರಿಂದ ಓಣಂ ಸದ್ಯ ಉಣಬಡಿಸಲಾಯಿತು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಂಕರನಾರಾಯಣ್ ಸ್ವಾಗತಿಸಿದರು.
ಕೆ.ಜಿ.ರಾಜ ವಂದಿಸಿದರು.
Back to top button
error: Content is protected !!