ಕುಶಾಲನಗರ ನ 2 : ಪ್ರತಿಯೊಬ್ಬ ಮನುಷ್ಯನ ಯಶಸ್ಸು, ಸುಖ, ಶಾಂತಿ ಹಾಗೂ ನೆಮ್ಮದಿಯುಕ್ತ ಬದುಕಿಗೆ ಪರಿಶುದ್ಧವಾದ ಹಾಗೂ ದೃಢವಾದ ಮನಸ್ಸೇ ಮೂಲ ಕಾರಣ ಎಂದು ಹರಿಹರಪುರದ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠದ ಅಧ್ಯಕ್ಷರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿ ಹೇಳಿದರು.
ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಶ್ರೀಮಠದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಮಾನ ಸಂಸ್ಕಾರ ಕಾರ್ಯಾಗಾರದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬ ಮನುಷ್ಯನಲ್ಲೂ ಮಾನವೀಯ ಮೌಲ್ಯಗಳು ತುಂಬಿದ ತ್ಯಾಗ ಹಾಗೂ ಸಮರ್ಪಣಾ ಮನೋಭಾವ ಅಭಿವ್ಯಕ್ತವಾಗಿರಬೇಕು.
ಅಮೂಲ್ಯವಾದ ಮಾನವ ಜನ್ಮ ಹೊತ್ತು ಬಂದ ಪ್ರತಿಯೊಬ್ಬರು ಹುಟ್ಟುವಾಗಲೇ ದೇವ ಋಣ, ಋಷಿ ರುಣ, ಪಿತೃ ಋಣ, ಮನುಷ್ಯ ಋಣ ಹಾಗೂ ಭೂತ ಋಣ ಎಂಬ ಐದು ಅಂಶಗಳಿಗೆ ಅಬಾರಿಯಾಗಿರಬೇಕು ಎಂದು ಶ್ರೀಗಳು ಸವಿವರವಾಗಿ ಮಾಹಿತಿ ನೀಡಿದರು.
ವಿಶ್ವ ಮಾನವ ಪ್ರೇಮ ಪರಸ್ಪರರಲ್ಲೂ ಅಭಿವ್ಯಕ್ತಗೊಂಡಲ್ಲಿ ಶ್ರೇಷ್ಠ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಸ್ವಾಮೀಜಿ ಹೇಳಿದ ಶ್ರೀಗಳು ಕಾವೇರಿ ನದಿ ಹುಟ್ಟಿ ಹರಿದಿಹ ಕೊಡಗಿನಲ್ಲಿ ಇರುವ ಮಂದಿ ಭಾಗ್ಯವಂತರು.
ನಾಡಿನ ಕೋಟ್ಯಾಂತರ ಜನರು ಹಾಗೂ ಜೀವಕೋಟಿಗೆ ಕುಡಿವ ನೀರನ್ನು ನೀಡುತ್ತಿರುವ ಕೊಡಗಿನ ಪ್ರತಿಯೊಬ್ಬರು ಕಾವೇರಿ ನದಿಯ ನೀರು ಮಲಿನವಾಗದಂತೆ ಎಚ್ಚರವಹಿಸಬೇಕಿದೆ ಎಂದು ಇದೇ ಸಂದರ್ಭ ಶ್ರೀಗಳು ಕರೆಕೊಟ್ಟರು.
ಹರಿಹರಪುರ ಶ್ರೀಮಠದ ಆಡಳಿತಾಧಿಕಾರಿ ಡಾ. ಬಿ.ಎಸ್.ರವಿಶಂಕರ್, ಅರಕಲಗೂಡು ಅರೆಮಾದನಹಳ್ಳಿ ವಿಶ್ವಕರ್ಮ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಕುಶಾಲನಗರದ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಮಾರುತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಎಲ್.ನಾಗರಾಜು, ಪುರಸಭೆ ಸದಸ್ಯರೂ ಆದ ಸಾಮಾಜಿಕ ಸೇವಾ ಕಾರ್ಯಕರ್ತರಾದ ಬಿ.ಅಮೃತರಾಜು, ಎಂ.ಕೆ.ದಿನೇಶ್, ಚಂದ್ರು, ಎಂ.ವಿ.ನಾರಾಯಣ ಇದ್ದರು.
ಇದೇ ಸಂದರ್ಭ ವಿದ್ಯಾರ್ಥಿಗಳೊಂದಿಗೆ ಶ್ರೀಮಠದ ಜಗದ್ಗುರು ಸಮಾನ ಸಂಸ್ಕಾರಗಳ ಕುರಿತಾಗಿ ಸಂವಾದ ನಡೆಸಿದರು. ಕಾರ್ಯಕ್ರಮಕ್ಕೂ ಮುನ್ನಾ ವೇದಬ್ರಹ್ಮ ರಘುನಾಥ ಶಾಸ್ತ್ರಿ ಅವರಿಂದ ವೇದ ಘೋಷ ನಡೆಯಿತು.
ಶಶಾಂಕ್ ತಂಡ ಪ್ರಾರ್ಥನೆ ನಡೆಸಿತು. ಬಿ.ಅಮೃತರಾಜು ನಿರೂಪಿಸಿ, ಎಂ.ಜಿ.ಎಂ ಕಾಲೇಜು ಉಪನ್ಯಾಸಕ ಮಂಜೇಶ್ ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮುನ್ನಾ ಶ್ರೀಗಳನ್ನು ಕಾಲೇಜು ವತಿಯಿಂದ ಪ್ರಾಂಶುಪಾಲೆ ಟಿ.ಎ.ಲಿಖಿತಾ ಹಾಗೂ ಉಪನ್ಯಾಸಕ ವೃಂದದಿಂದ ಭಕ್ತಿಪೂರ್ವಕವಾಗಿ ಸ್ವಾಗತಿಸಿಕೊಳ್ಳಲಾಯಿತು.
Back to top button
error: Content is protected !!