ಸಭೆ

ಸೆ.22 ರಂದು ಕೊಡಗು ಜಿಲ್ಲೆಗೆ ಬಸವ ಸಂಸ್ಕ್ರತಿ ಯಾತ್ರೆ ಆಗಮನ: ಪೂರ್ವಭಾವಿ ಸಭೆ

ಶನಿವಾರಸಂತೆ, ಸೆ 10: ಕೊಡಗು ಜಿಲ್ಲೆಗೆ ಸೆಪ್ಟೆಂಬರ್ 22 ರಂದು ಆಗಮಿಸಲಿರುವ ಬಸವ ಸಂಸ್ಕೃತಿ ಅಭಿಯಾನ ಯಾತ್ರೆಯನ್ನು ಕೊಡಗು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು ಒಗ್ಗೂಡಿ ಸ್ವಾಗತಿಸಿಕೊಳ್ಳುವ ವಿಚಾರವಾಗಿ ಕೊಡಗು ಮಠಾಧಿಪತಿಗಳ ಸಮ್ಮುಖದಲ್ಲಿ ಮಂಗಳವಾರ ರಾತ್ರಿ ಶನಿವಾರಸಂತೆಯ ಮನೆಹಳ್ಳಿ ಮಠದಲ್ಲಿ ಪೂರ್ವ ಬಾವಿ ಸಭೆ ಜರುಗಿತು.
ಸೆ. 3 ರಿಂದ ಬಸವೇಶ್ವರರ ಕಲ್ಯಾಣದ ನಾಡು ಬೀದರ್ ನಿಂದ ಆರಂಭಗೊಂಡ ಅಭಿಯಾನ ರಾಜ್ಯದ 31 ಜಲ್ಲೆಗಳಲ್ಲಿ ಸಂಚರಿಸುತ್ತದೆ.
ಸೆ. 21 ರಂದು ಹಾಸನ ಜಿಲ್ಲೆಗೆ ಬಂದು ಸೆ 22 ರಂದು ಕೊಡ್ಲಿಪೇಟೆಗೆ ಧಾವಿಸಲಿದೆ.
ಅಂದು ಕೊಡಗು ಜಿಲ್ಲೆಯ ಎಲ್ಲಾ ಬಸವಪರ ಚಿಂತನೆಗಳ ಒಕ್ಕೂಟಗಳು, ಸಂಘ ಸಂಸ್ಥೆಗಳು, ಅಖಿಲ ಭಾರತ ವೀರಶೈವ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು ಸೇರಿದಂತೆ ಎಲ್ಲಾ ಸಮುದಾಯಗಳ ಮಂದಿ ಬಸವ ಸಂಸ್ಕೃತಿ ಅಭಿಯಾನವನ್ನು ಕೊಡ್ಲಿಪೇಟೆಯ ಬಸವೇಶ್ವರ ದೇವಾಲಯದ ಬಳಿ ಸ್ವಾಗತಿಸಿಕೊಂಡು ಮೆರವಣಿಗೆ ಮೂಲಕ ಕಿರಿಕೊಡ್ಲಿ ಮಠದ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯುವ ಧಾರ್ಮಿಕ ಸಭಾ ವೇದಿಕೆಗೆ ಆಗಮಿಸಲಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಹಾಗೂ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಾಂಬಶಿವಮೂರ್ತಿ ಹೇಳಿದರು.
ಧಾರ್ಮಿಕ ಸಭೆಯಲ್ಲಿ ಉತ್ತರ ಕರ್ನಾಟಕದ ಹೆಸರಾಂತ ಮಠಗಳ ಪೀಠಾಧಿಪತಿಗಳು, ಕೊಡಗು ಜಿಲ್ಲೆಯ ಎಲ್ಲಾ ಮಠಾಧಿಪತಿಗಳು ಭಾಗವಹಿಸಲಿದ್ದಾರೆ.
ಬಸವಪರವಾದ ಶ್ರೇಷ್ಠ ಚಿಂತನೆಗಳನ್ನು ಹೊಂದಿರುವ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ, ರಾಜ್ಯ ಉಚ್ಚನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ ಮೊದಲಾದ ಗಣ್ಯರು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಹನ್ನೆರಡನೆ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿರುವುದರಿಂದ ಬಸವಣ್ಣನ ವಿಚಾರಧಾರೆ ಗಳು ಜನಸಮುದಾಯಕ್ಕೆ ತಲುಪಬೇಕು.
ಬಸವಣ್ಣ ಕೇವಲ ಸಮುದಾಯ ಒಂದರ ನಾಯಕನಲ್ಲ.
ಮಾನವ ಕುಲದ ನಾಯಕನಾಗಿ ಸರ್ವ ಸಮ್ಮತವಾಗಿ ಎಲ್ಲಾ ಜನರು ವಚನಗಳ ಅಧ್ಯಯನದ ಮೂಲಕ ಬಸವೇಶ್ವರರ ವಿಚಾರಧಾರೆಗಳನ್ನು ಅರಿತು ಆತ್ಮಕಲ್ಯಾಣ ಮಾಡಿಕೊಂಡಲ್ಲಿ ತನ್ನಿಂದ ತಾನೇ ಸಮಾಜ ಕಲ್ಯಾಣ ವಾಗುತ್ತದೆ ಎಂಬ ದೃಷ್ಟಿಕೋನದಿಂದ ರಾಜ್ಯದ ಜನಮಾನಸದಲ್ಲಿ ಬಸವಣ್ಣನನ್ನು ನೆಲೆಸುವಂತೆ ಮಾಡಲು ಈ ಯಾತ್ರೆ ಹಾಗೂ ಅಭಿಯಾನ ಆಯೋಜಿತವಾಗಿದೆ ಎಂದು ಪೂರ್ವಸಭೆಯಲ್ಲಿ ಉಪಸ್ಥಿತರಿದ್ದ ವಿರಾಜಪೇಟೆ ತಾಲ್ಲೂಕಿನ ಅರಮೇರಿಯ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ ಆಶಿಸಿದರು.
ಪೂರ್ವಭಾವಿ ಸಭೆಯಲ್ಲಿ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ.ಪರಮೇಶ್,
ಮುದ್ದಿನ ಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನೆಹಳ್ಳಿ ತಪೋವನ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ,
ಕೊಡ್ಲಿಪೇಟೆ ಕಲ್ಲಳ್ಳಿ ಮಠದ
ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ, ಸಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ,
ವೀರಶೈವ ಮಹಾಸಭಾದ ಪದಾಧಿಕಾರಿಗಳಾದ ನಿಲುವಾಗಿಲು ಮದನ್, ಚಂದ್ರಶೇಖರ್, ಗಣಗೂರು ಚಂದ್ರಶೇಖರ್, ಯಶೋಧಮ್ಮ, ಮರೂರು ಹೆಚ್.ಎಸ್. ನಾಗರಾಜ್, ಹೆಬ್ಬಾಲೆ ಬಸವಣ್ಣ, ಕುಮಾರ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!