ಕುಶಾಲನಗರ ನ 1 : ಕುಶಾಲನಗರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.
ಕುಶಾಲನಗರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ತಾಲೂಕು ತಹಸೀಲ್ದಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಕಿರಣ್ ಗೌರಯ್ಯ ಧ್ವಜಾರೋಹಣ ನೆರವೇರಿಸಿದರು. ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಪೊಲೀಸ್, ಅರಣ್ಯ ಇಲಾಖೆ ಸೇರಿದಂತೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ತಂಡದಿಂದ ಪಥಸಂಚಲನ ನಡೆಯಿತು.
ತಹಸೀಲ್ದಾರ್ ಕಿರಣ್ ಗೌರಯ್ಯ, ಸೋಮವಾರಪೇಟೆ ಉಪವಿಭಾಗ ಪೊಲೀಸ್ ಉಪ ಅಧೀಕ್ಷಕ ಗಂಗಾಧರಪ್ಪ ಪಥಸಂಚನಲದ ಗೌರವ ವಂದನೆ ಸ್ವೀಕರಿಸಿದರು.
ದಿನದ ಸಂದೇಶ ನೀಡಿದ ತಹಸೀಲ್ದಾರ್ ಕಿರಣ್ ಗೌರಯ್ಯ, ಕರ್ನಾಟಕ ಎಂಬ ಹೆಸರು ಮರುನಾಮಕರಣದ ಬಗ್ಗೆ ವಿವರಿಸಿದರು. ಅನ್ಯ ಭಾಷಿಗರ ಪ್ರಭಾವ ಎಷ್ಟೇ ಇದ್ದರೂ ನಮ್ಮ ನಾಡು ನುಡಿ ಪೋಷಣೆ, ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಬೇಕು ಎಂದು ಕರೆ ನೀಡಿದರು.
ಕೊಡಗು ವಿವಿ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮ್ಮದ್ ಮುಖ್ಯ ಭಾಷಣ ಮಾಡಿದರು.
ಜಗತ್ತಿಗೆ ವಿಶ್ವಮಾನವ ಸಂದೇಶ ಸಾರಿದ ಭಾಷೆ ಕನ್ನಡ. ಕನ್ನಡ ಭಾಷೆಯ ಬಗ್ಗೆ ತಾತ್ಸಾರ, ಉದಾಸೀನ ಸಲ್ಲದು. ವಿದ್ಯಾವಂತ ಸಮುದಾಯದಿಂದ ಭಾಷೆಯ ಕಡೆಗಣನೆ ಆಗುತ್ತಿದೆ. ಕನ್ನಡ ಭಾಷೆಯನ್ನು ಹೆಚ್ಚಿನ ಮಟ್ಟದಲ್ಲಿ ಬಳಕೆ ಮಾಡಬೇಕಿದೆ. ಕನ್ನಡಿಗರ ತಮ್ಮ ಜವಾಬ್ದಾರಿ ಅರಿತು ಕನ್ನಡ ಭಾಷೆ ಪ್ರೀತಿಸಲು ಪಣತೊಡಬೇಕಿದೆ ಎಂದರು.
ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಉಪಾಧ್ಯಕ್ಷ ಎಚ್.ಜೆ.ದೊಡ್ಡಯ್ಯ, ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವರದರಾಜು, ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್, ಉಪ ತಹಸೀಲ್ದಾರ್ ಮಧುಸೂದನ್, ಉಪಖಜಾನೆ ಅಧಿಕಾರಿ ವಿಜಯಕುಮಾರ್, ಆರ್.ಎಫ್.ಒ.ರತನ್ ಕುಮಾರ್, ಕುಡಾ ಸದಸ್ಯ ಕಾರ್ಯದರ್ಶಿ ಸ್ವಾತಿ ಮತ್ತಿತರರು
ಇದ್ದರು.
ಈ ಸಂದರ್ಭ ಸಾಹಿತಿ, ಶಿಕ್ಷಕಿ ಸುನಿತಾ, ಪತ್ರಕರ್ತ ಕೆ.ಕೆ.ನಾಗರಾಜಶೆಟ್ಟಿ, ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಪೌರ ಕಾರ್ಮಿಕ ಮಾದ, ಉಪನ್ಯಾಸಕ ಜಮೀರ್ ಅಹಮ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಭಾ ಕಾರ್ಯಕ್ರಮ ಮುನ್ನ ಕನ್ನಡಾಂಭೆಯ ಭಾವಚಿತ್ರಕ್ಕೆ ಮೆರವಣಿಗೆ ನಡೆಯಿತು.
Back to top button
error: Content is protected !!