ಧಾರ್ಮಿಕ
ಕಾವೇರಿ ಜಾಗೃತಿ ರಥಯಾತ್ರೆ: ಕೊಡಗು ಜಿಲ್ಲೆಗೆ ಆಗಮಿಸಿದ ಸಾಧುಸಂತರು
ಕುಶಾಲನಗರ, ಅ 19:
ಸ್ವಚ್ಛ ಕಾವೇರಿಗಾಗಿ ಹಮ್ಮಿಕೊಳ್ಳಲಾದ 13ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಖಿಲ ಭಾರತ ಸನ್ಯಾಸಿ ಸಂಘದ ಸಾಧು ಸಂತರು ಗುರುವಾರ ಕೊಡಗು ಜಿಲ್ಲೆಗೆ ಆಗಮಿಸಿದರು.
ಕರ್ನಾಟಕ ತಮಿಳುನಾಡಿನ ಗಡಿ ಭಾಗ ಹೊಸೂರು ಮೂಲಕ ರಾಜ್ಯಕ್ಕೆ ಆಗಮಿಸಿ ತಲಕಾವೇರಿ ಕ್ಷೇತ್ರಕ್ಕೆ ತೆರಳುವ ಸಂದರ್ಭ ಕುಶಾಲನಗರ ಗಡಿಭಾಗದಲ್ಲಿ ಕಾವೇರಿ ಮಹಾ ಆರತಿ ಬಳಗದ ಪ್ರಮುಖರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
ಸನ್ಯಾಸಿ ಸಂಘದ ಪ್ರಮುಖರಾದ ಶ್ರೀ ಮುರುಗಾನಂದ ಸರಸ್ವತಿ , ಶ್ರೀ ಮೇಘಾನಂದ ಸರಸ್ವತಿ, ಮತ್ತು ಶ್ರೀ ಶಿವರಾಮನಂದ ಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಆಗಮಿಸಿದ 20ಕ್ಕೂ ಅಧಿಕ ಸಾಧು ಸಂತರು ಆಗಮಿಸಿದರು. ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ವನಿತಾ ಚಂದ್ರಮೋಹನ್, ಕೊಕ್ಕಲೆರ ಧರಣಿ ಸೋಮಣ್ಣ, ಚೈತನ್ಯ ಮತ್ತಿತರರು ಸಾಧುಸಂತರನ್ನು ಜಿಲ್ಲೆಯ ಗಡಿಭಾಗದಲ್ಲಿ ಬರಮಾಡಿಕೊಂಡು ರಥಯಾತ್ರೆಯಲ್ಲಿ ತಂದ ಮಾತೆ ಕಾವೇರಿಗೆ ಪೂಜೆ ಸಲ್ಲಿಸಲಾಯಿತು.
ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸ್ಥಾಪಕರಾದ ಶ್ರೀ ಗಣೇಶ ಸ್ವರೂಪನಂದ ಗಿರಿ ಸ್ವಾಮೀಜಿ ಮತ್ತು ಅಖಿಲ ಭಾರತ ಸನ್ಯಾಸಿ ಸಂಘದ ಕಾರ್ಯದರ್ಶಿ ಶ್ರೀ ಆತ್ಮಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಂತರ ಎರಡನೇ ತಂಡ ತಲಕಾವೇರಿಗೆ ಆಗಮಿಸಿದೆ.
ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕಾವೇರಿ ರಿವರ್ ಸೇವಾ ಟ್ರಸ್ಟ್ ಮತ್ತು ಅಣ್ಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್ ಆಶ್ರಯದಲ್ಲಿ ನಡೆಯುವ 13ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ತಲಕಾವೇರಿ ಕ್ಷೇತ್ರದಿಂದ ಚಾಲನೆ ದೊರೆಯಲಿದೆ. ಕಾವೇರಿ ಜಾಗೃತಿ ರಥಯಾತ್ರೆ ತಂಡ ನವಂಬರ್ 13ರ ತನಕ ಕಾವೇರಿ ನದಿ ತಟದಲ್ಲಿ ತೆರಳಲಿದ್ದು ನದಿ ಸಮುದ್ರ ಸೇರುವ ಪೂoಪ್ ಹಾರ್ ತನಕ ಸಾಗಲಿದೆ. ನದಿ ತಟದ ಜನರಿಗೆ ನದಿಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿದೆ.
ತಲಕಾವೇರಿ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಗೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ದಿವ್ಯ ಸಾನಿಧ್ಯ ವಹಿಸಲಿದ್ದು ಯಾತ್ರೆಗೆ ಚಾಲನೆ ನೀಡುವರು.
ತಲಕಾವೇರಿಯಿಂದ ಹೊರಡುವ ಕಾವೇರಿ ನದಿ ಜಾಗೃತಿ ಯಾತ್ರೆ ತಂಡ ಭಾಗಮಂಡಲ ಕುಶಾಲನಗರ ಮೂಲಕ ಕಣಿವೆ ಗೆ ತೆರಳಿ ನಂತರ ರಾಮನಾಥಪುರದತ್ತ ಸಾಗಲಿದೆ ಎಂದು ಯಾತ್ರೆಯ ಆಯೋಜಕರಾದ ಎಂ ಎನ್ ಚಂದ್ರಮೋಹನ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಅಖಿಲ ಭಾರತ ಸನ್ಯಾಸಿ ಸಂಘದ ಸದಸ್ಯರು 150ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಕೊಡ್ಲಿಪೇಟೆ ಕಿರಿ ಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.