ಕುಶಾಲನಗರ,ಅ.19: ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎನ್ನುವುದು ಅರ್ಥಹೀನವಾದುದು. ಇದರ ಬದಲಾಗಿ ಕನ್ನಡ ಭಾಷೆ, ಸಂಸ್ಕೃತಿಯನ್ನು ನಮ್ಮ ನಿತ್ಯ ಜೀವನ ಹಾಗೂ ನಮ್ಮ ವ್ಯವಹಾರಗಳಲ್ಲಿ ಬಳಸುವುದು ಆದ್ಯ ಕರ್ತವ್ಯವಾಗಬೇಕೆಂದೂ ಜಿಲ್ಲಾ ಲೀಡ್‌ಬ್ಯಾಂಕಿನ (ಅಗ್ರಣಿ ಬ್ಯಾಂಕ್) ಮಾಜಿ ಮುಖ್ಯ ವ್ಯವಸ್ಥಾಪಕರೂ ಆದ ವೃತ್ತಿ ಮಾರ್ಗದರ್ಶಕರಾದ ಆರ್.ಕೆ.ಬಾಲಚಂದ್ರ ಕರೆ ನೀಡಿದ್ದಾರೆ.
ಜಿಲ್ಲಾ ಕ.ಸಾ.ಪ.ಸಹಯೋಗದಲ್ಲಿ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು( ಕ.ಸಾ.ಪ.) ವತಿಯಿಂದ ಕುಶಾಲನಗರದ ಸರಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಾಹಿತಿ ದಿವಂಗತ ಎನ್.ಮಹಾಬಲ್ಲೇಶ್ವರ ಭಟ್ ಅವರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕನ್ನಡದ ಏಳು ಬಿಳುಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಉಳಿಯಲು ಅಥವಾ ಅಳಿಯಲು ನಾವೇ ಕಾರಣರಾಗುತ್ತೇವೆ , ಭಾಷೆ ಜೀವಂತವಾಗಿರಬೇಕಾದರೆ ಮಾತು ಮತ್ತು ಬರಹ ಎರಡು ಕೂಡ ಪ್ರಮುಖವಾಗಿರಬೇಕು ಎಂದು ಹೇಳಿದ ಅವರು, ಕನ್ನಡದ ಕುರಿತಾದ ಒಲವು ಮತ್ತು ಆರಿವನ್ನು ವಿದ್ಯಾರ್ಥಿ ಸಮುದಾಯದಲ್ಲಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದರು.
ಒಂದು ಭಾಷೆ ನಾಶವಾದರೆ ಅದನ್ನು ಮಾತನಾಡುವ ಸಮುದಾಯ ಕೂಡ ಕ್ರಮೇಣ ನಾಶವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ ಅವರು, ಜಗತ್ತಿನಲ್ಲಿ ಪ್ರತಿದಿನವೂ ಕನಿಷ್ಠ 2 ಭಾಷೆಗಳು ನಾಶ ಹೊಂದುತ್ತಿದ್ದು, ಇದಕ್ಕೆ ಕಾರಣ ಆ ಭಾಷೆಯನ್ನು ಬಳಸಲು ಸಾಧ್ಯವಾಗದೇ ಇರುವುದು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿದ ಅವರು, ಕನ್ನಡದ ಮನಸ್ಸುಗಳು ಜಾಗೃತಗೊಂಡು ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವು ಕೂಡ ಬದಲಾಗುತ್ತ ಕನ್ನಡ ಭಾಷೆ ಮತ್ತು ನಾವು ತಾಯಿ – ಮಗುವಿನ ರೀತಿಯ ಸಂಬಂಧವನ್ನು ಹೊಂದಿ ಭಾಷೆಯಲ್ಲಿ ಹೊಸತನವನ್ನು ಹೊಂದುವ ಸೃಷ್ಠಿ ಶೀಲಾತೆಯನ್ನು ಹೊಂದುವ ಅನಿವಾರ್ಯತೆಯನ್ನು ಇದೆಯೆಂದು ಹೇಳಿದರು.
ಜನಪದ ಸಾಹಿತ್ಯದಲ್ಲಿ ಮತ್ತು ಬರಹ ರೂಪದಲ್ಲಿ ಕನ್ನಡ ಸಾಹಿತ್ಯದ ಅನಂತ ಸಾಧ್ಯತೆಗಳು ಮತ್ತು ವಿರಾಟ್ ಸ್ವರೂಪವನ್ನು ಅದ್ಬುತವಾಗಿ ಸೋದಹರಣವಾಗಿ ವಿವರಿಸಿದ ಅವರು, ತಮ್ಮ ಮಾತುಗಾರಿಕೆಯಿಂದ ಕನ್ನಡದ ನುಡಿಸೊಬಗನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕನ್ನಡ ನಿರಂತರತೆಯನ್ನು ಕಾಪಾಡಿಕೊಳ್ಳಲು ಕನ್ನಡ ಬಳಕೆಗೆ ಮನೆಯೇ ಮೊದಲ ಪಾಠ ಶಾಲೆಯಾಗುವುದು ಅಚ್ಚಕನ್ನಡದ ಹೆಸರುಗಳನ್ನು ಮಕ್ಕಳಿಗೆ ಇಡಬೇಕು ಕನ್ನಡದಲ್ಲಿ ಬರೆಯಲು ಮತ್ತು ಓದಲು ಬಾಲ್ಯದಿಂದಲೇ ಕಲಿಸುವುದಲ್ಲದೆ ಪ್ರತಿದಿನವೂ ಕನ್ನಡ ಪತ್ರಿಕೆಗಳು ಹಾಗೂ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ, ಕನ್ನಡ ಚಲಚಿತ್ರ ಹಾಗೂ ಕನ್ನಡ ಟಿ.ವಿ. ಚಾನೆಲ್‌ಗಳನ್ನು ನೋಡುವ ಮೂಲಕ ಕನ್ನಡ ಬಳಕೆ ಕನ್ನಡದ ಬೆಳವಣಿಗೆಯನ್ನು ನಾವು ಮಾಡಬೇಕಾಗಿದೆ ಎಂದು ಕರೆ ನೀಡಿದರು.
ನಾವು ನವೆಂಬರ್ ಮಾಸದಲ್ಲಿ ಮಾತ್ರ ಕನ್ನಡಿಗರಾಗದೇ ವರ್ಷವಿಡೀ ಕನ್ನಡದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕನ್ನಡದ ಕುರಿತಾದ ಮಿಡಿತಗಳನ್ನು ಹೊಂದಿರಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯವು ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿದ್ದು, ಅಪ್ಪಟ ಜೀವನ ಪ್ರೀತಿ ಮಾನವೀಯತೆ, ಸಹಬಾಳ್ವೆ ಕನ್ನಡದ ಜೀವವಾಗಿದ್ದು, ಸಕಾಲ ಜೀವಾತ್ಮರಿಗೆ ಒಳಿತನ್ನು ಬಯಸುವುದೇ ಕನ್ನಡ ಭಾಷೆ ಸಾಹಿತ್ಯದ ಅಂತರಂಗದ ಧ್ವನಿಯಾಗಿದೆ ಎಂದರು.
ಸಾಹಿತಿ ದಿವಂಗತ ಎನ್.ಮಹಾಬಲೇಶ್ವರ ಭಟ್ ಅವರ ಪುತ್ರ ಬಿಳಿಗೇರಿಯ ಕಾಫಿ ಬೆಳೆಗಾರ ಎನ್.ಎಂ.ಕುಮಾರ್ ಮಾತನಾಡಿ, ತನ್ನ ತಂದೆ 1960 ರಷ್ಟು ಹಿಂದೆಯೇ ಕನ್ನಡ ಪಂಡಿತರಾಗಿ ಶಿಕ್ಷಕರಾಗಿ ಪ್ರಾಂಶುಪಾಲರಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯ ಕೃಷಿ ಮಾಡಿದ್ದಾರೆಂದು ಸ್ಮರಿಸಿದರು.
ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ವಿದ್ಯಾತಪ್ಪಸ್ವಿಗಳಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಸ್.ಸತೀಶ್ ಮಾತನಾಡಿ, ಕಳೆದ ವರ್ಷದಿಂದ ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವುದು ಕಡ್ಡಾಯವಾಗಿದೆ. ಹಾಗೆಯೇ 15 ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗವನ್ನು ಕಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ಅ ನಿವೃತ್ತ ಕನ್ನಡಪರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮ್‌ಕುಮಾರ್ ದತ್ತಿನಿಧಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ನಾಗರಾಜ್, ಟಿ.ವಿ.ಶೈಲಾ, ಕೋಶಾಧಿಕಾರಿ ಕೆ.ವಿ.ಉಮೇಶ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ ಎಸ್.ರಂಗನಾಥ್, ಹೇಮಲತಾ, ಸಹನಾ ಇದ್ದರು.
ತಾಲ್ಲೂಕು ಕಸಾಪದ ಗೌರವ ಕಾರ್ಯದರ್ಶಿ ಎಸ್.ನಾಗರಾಜು ಸ್ವಾಗತಿಸಿದರು. ಕಸಾಪ ಪದಾಧಿಕಾರಿ ಲೀಲಾ ತೊಡಿಕಾನ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿ ಬಿ.ಬಿ.ಸಾವಿತ್ರಿ ವಂದಿಸಿದರು.
ಇದೇ ವೇಳೆ ಆರ್.ಕೆ.ಬಾಲಚಂದ್ರ ಅವರನ್ನು ತಾಲ್ಲೂಕು ಕ.ಸಾ.ಪ.ವತಿಯಿಂದ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು.
ತಾಲೂಕು ಕಸಾಪ ಪದಾಧಿಕಾರಿಗಳು ಕಾಲೇಜಿನ ವಿದ್ಯಾರ್ಥಿ ಸಮೂಹ ಉಪಸ್ಥಿತರಿದ್ದರು.
Back to top button
error: Content is protected !!