ಕುಶಾಲನಗರ ಡಿ 25 : ಕುಶಾಲನಗರ ಪಟ್ಟಣದಲ್ಲಿ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬ ಶ್ರದ್ಧಾ ಭಕ್ತಿಯಿಂದ ಹಾಗು ವಿಜೃಂಭಣೆಯಿಂದ ಆಚರಿಸಿದರು.
ಕುಶಾಲನಗರದ ಹೃದಯ ಭಾಗದಲ್ಲಿರುವ ಸಂತ ಸೆಬಾಸ್ಟಿಯನ್ನರ ದೇವಾಲಯ ದಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ರೈಸ್ತ ಬಾಂಧವರು ಹೊಸ ಉಡುಗೆ ತೊಡುಗೆ ಧರಿಸಿ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕುಶಾಲನಗರದ ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಧರ್ಮಗುರು ವಂ.ಫಾ.ಎಂ. ಮಾರ್ಟಿನ್ ಹಾಗೂ ತಪೋವನ ಗುರು ಮಠದ ವಂ.ಫಾ. ವಿಲ್ ಫ್ರೆಡ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಯೇಸು ಕ್ರಿಸ್ತ ದೇವರ ಪುತ್ರ ಹಾಗೂ ಮಾನವ ಕುಲದ ಪಾಪ ವಿಮೋಚನೆಗಾಗಿ ಅವರನ್ನು ದೇವರೇ ಕಳುಹಿಸಿದರು. ಯೇಸು ಕ್ರಿಸ್ತರ ಆಗಮನದ ಬಗ್ಗೆ ದೇವರು ಪ್ರವಾದಿಗಳ ಮುಖಾಂತರ ಸುಮಾರು 600 ವರ್ಷಗಳ ಮೊದಲೇ ಪ್ರಕಟ ಪಡಿಸಿದ್ದರು’ ಎನ್ನುವುದು ಕ್ರೈಸ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ವಿಮೋಚಕರೊಬ್ಬರು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದರು. ಅದರಂತೆ ಮರಿಯ ಎಂಬ ಯುವತಿಯ ಗರ್ಭದಲ್ಲಿ ಪವಿತ್ರಾತ್ಮನ ವರಗಳ ಕೃಪೆಯಿಂದ ಅವತರಿಸಿ ಯೇಸು ಜನಿಸಿದರು’ ಎಂಬ ಉಲ್ಲೇಖ ಕ್ರೈಸ್ತರ ಧರ್ಮ ಗ್ರಂಥ ಬೈಬಲ್‌ನಲ್ಲಿದೆ ಎಂದು ಕ್ರಿಸ್ಮಸ್ ಆಚರಣೆಯ ಬಗ್ಗೆ ಸಂದೇಶ ವಂ.ಫಾ. ವಿಲ್ ಫ್ರೆಡ್ ರವರು ಭಕ್ತಾದಿಗಳಿಗೆ ನೀಡಿದರು . ಸಂತ ಸೆಬಾಸ್ಟಿಯನ್ ದೇವಾಲಯದ ಯುವಕ ಸಂಘದಿಂದ ಯೇಸುವಿನ ಜನನವನ್ನು ಸ್ಮರಿಸಲು ಗೋದಲಿಯನ್ನು ವಿಭಿನ್ನವಾಗಿ ನಿರ್ಮಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಾಲಯದ ಸಲಹಾ ಸಮಿತಿ , ಯುವಕ ಸಂಘ, ಮರಣ ನಿಧಿ ಸದಸ್ಯರು ಹಾಗು ಭಕ್ತಾದಿಗಳು ನೆರೆದಿದ್ದರು.
ಕ್ರೈಸ್ತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ದನಕೊಟ್ಟಿಗೆಯಲ್ಲಿ ಜನಿಸಿದ ಏಸುವಿನ ನೆನಪಿಗಾಗಿ ಗೋದಲಿ ನಿರ್ಮಿಸಿ, ಅದರಲ್ಲಿ ಬಾಲ ಏಸುವಿನ ಹಾಗೂ ಮಾತೆ ಮೇರಿಯ ಗೊಂಬೆ ಸ್ಥಾಪಿಸಲಾಗಿತ್ತು. ಕ್ರಿಸ್ ಮಸ್ ಮರಕ್ಕೆ ಅಲಂಕಾರ, ಮನೆಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಿದ್ದರು.
Back to top button
error: Content is protected !!