ಸಭೆ

ಕುಶಾಲನಗರದಲ್ಲಿ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ: ಸಂಘಸಂಸ್ಥೆಗಳಿಂದ ಹಲವು ಮನವಿ

ಕುಶಾಲನಗರ, ಡಿ 24: ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ವತಿಯಿಂದ ಮಡಿಕೇರಿ ಕ್ಷೇತ್ರ ಶಾಸಕರೊಂದಿಗೆ ಸಂವಾದ ಕಾರ್ಯಕ್ರಮ ಕನ್ನಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರದ ಅಭಿವೃದ್ಧಿ ವಿಚಾರಕ್ಕೆ‌ ಸಂಬಂಧಿಸಿದಂತೆ ನೆರೆದಿದ್ದ ವಿವಿಧ ಸಂಘಸಂಸ್ಥೆಗಳ ಪ್ರಮುಖರು ಶಾಸಕರೊಂದಿಗೆ ಚರ್ಚಿಸಿದರು.

ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು, ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಚಿಂತನೆ‌ ಹರಿಸುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡರು.

ಅಪೂರ್ಣವಾಗಿರುವ ಯುಜಿಡಿ, ಕಲಾಭವನ, ಪುರಸಭೆ ವಾಣಿಜ್ಯ ಭವನ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ ಕಾಮಗಾರಿ ಪೂರ್ಣಗೊಳಿಸಬೇಕು, ಹಾರಂಗಿಯಿಂದ 24*7 ಕುಡಿವ ನೀರಿನ‌ ಯೋಜನೆ‌ ಅನುಷ್ಠಾನ, ಎರಡನೇ ಕೈಗಾರಿಕಾ ಬಡಾವಣೆ ಸ್ಥಾಪನೆ, ವಾಹನ ದಟ್ಟಣೆ ನಿಭಾಯಿಸಲು ರಿಂಗ್ ರೋಡ್ ಗಳ ನಿರ್ಮಾಣ, ಸುಸಜ್ಜಿತ ಕ್ರೀಡಾಂಗಣ, ದಿ.ಮಾಜಿ ಮುಖ್ಯಮಂತ್ರಿ ಗುಂಡುರಾವ್ ಪುತಃಳಿ ಸ್ಥಾಪನೆ, ಹೃದ್ರೋಗ ಘಟಕ ಸ್ಥಾಪನೆ, ಬೀದಿನಾಯಿಗಳ‌ ಹಾವಳಿ ನಿಯಂತ್ರಣ, ರುದ್ರ ಭೂಮಿಯಲ್ಲಿ ಎಲೆಕ್ಟ್ರಿಕ್ ಬರ್ನಿಂಗ್ ಹೆಚ್ಚುವರಿ ವ್ಯವಸ್ಥೆ, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಬೇಕು, ಕಾವೇರಿ ನದಿಯಲ್ಲಿ ಶಿಲ್ಟ್ ಸ್ಥಳಾಂತರ, ಜಿಎಂಪಿ ಶಾಲೆ ಮುಂಭಾಗ ಸ್ಕೈವಾಕ್ ನಿರ್ಮಾಣ ಎಂಬಿತ್ಯಾದಿ ಬೇಡಿಕೆಗಳನ್ನು ಸಭೆಯಲ್ಲಿದ್ದ ಗಣ್ಯರು ಶಾಸಕರ ಮುಂದಿಟ್ಟರು.

ಈ ಸಂದರ್ಭ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಸಭೆಯಲ್ಲಿ‌ ಕೇಳಿಬಂದ ಹಲವು ಸಲಹೆಗಳ ಬಗ್ಗೆ ಈಗಾಗಲೆ‌ ನಾನು ಚಿಂತನೆ ಹರಿಸಿದ್ದೇನೆ. ಯುಜಿಡಿ ಕಾಮಗಾರಿ ಚಾಲನೆ ಹಂತದಲ್ಲಿದೆ, ಅಮೃತ್ 2 ಯೋಜನೆಯಡಿ 40 ಕೋಟಿ ರೂ ವೆಚ್ಚದಲ್ಲಿ ಹಾರಂಗಿ-ಕೂಡಿಗೆ‌ ನದಿಗಳ ಸಂಗಮ ಭಾಗದಿಂದ ನೀರೆತ್ತಿ ಪೂರೈಸುವ ಯೋಜನೆ ಕಾಮಗಾರಿ ಈಗಾಗಲೆ ಪ್ರಗತಿಯಲ್ಲಿದೆ. ಇದರಿಂದ ಬೇಸಿಗೆಯಲ್ಲಿ ‌ಕುಡಿವ ನೀರಿನ ಅಭಾವ ನೀಗಲಿದೆ. ಅಪೂರ್ಣವಾಗಿರುವ ಪುರಸಭೆ ವಾಣಿಜ್ಯ‌ ಭವನವನ್ನು ಹೆಚ್ಚುವರಿ ಎರಡು ಕೋಟಿ ವಿನಿಯೋಗಿಸಿ ಪೂರ್ಣಗೊಳಿಸಲಾಗುವುದು, ಕಲಾಭವನ ಕಾಮಗಾರಿ ಕೆಲವು ತಾಂತ್ರಿಕ‌ ಸಮಸ್ಯೆಯಿಂದ ನಿಧಾನವಾಗಿದ್ದು ಐದಾರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ, ತಾಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸುವ ಸಂಬಂಧ ಜಾಗದ ವಿವಾದ ನ್ಯಾಯಾಲಯದಲ್ಲಿರುವ ಬಗ್ಗೆ ಶಾಸಕರು ಸಭೆಯ ಗಮನಕ್ಕೆ‌ ತಂದರು.
ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಹೃದ್ರೋಗ ಘಟಕ ತೆರೆಯಲು ಈಗಾಗಲೆ ಕ್ರಮವಹಿಸಲಾಗಿದೆ, ಕುಶಾಲನಗರ ಸಾರಿಗೆ ಬಸ್ ನಿಲ್ದಾಣ ಅಭಿವೃದ್ಧಿಗೆ ಈಗಾಗಲೆ ಸಾರಿಗೆ ಸಚಿವರ ಗಮನ ಸೆಳೆಯಲಾಗಿದೆ ಎಂದರು.

ಉಳಿದಂತೆ ಸ್ವಚ್ಚತೆ, ಬೀದಿದೀಪ ಅಳವಡಿಕೆ, ಪಾರ್ಕಿಂಗ್ ವ್ಯವಸ್ಥೆಗಳ ಸುಧಾರಣೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಕೊಯಿಮ್ಸ್ ನಲ್ಲಿರುವ ಎಂಆರ್ ಐ ವ್ಯವಸ್ಥೆ ಬಗ್ಗೆ ಹೆಚ್ಚಿನ ಪ್ರಚಾರದೊಂದಿಗೆ ರೋಗಿಗಳು ಸೌಲಭ್ಯ ಪಡೆದುಕೊಳ್ಳಲು ಶಾಸಕರು ಸೂಚಿಸಿದರು. ಕುಶಾಲನಗರದಲ್ಲಿ ಕೆಲವೇ ದಿನಗಳಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆಯಾಗಲಿದ್ದು, ಆಹಾರ ಗುಣಮಟ್ಟದ ಬಗ್ಗೆ ಅಂಜಿಕೆಯಿಲ್ಲದೆ ಎಲ್ಲರೂ ಉಪಯೋಗಪಡೆದುಕೊಳ್ಳುವಂತಾಗಬೇಕು ಎಂದರು.

ಈ ಸಂದರ್ಭ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್,
ವಕೀಲ ಆರ್.ಕೆ.ನಾಗೇಂದ್ರಬಾಬು, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್, ಕಾರ್ಯದರ್ಶಿ ಚಿತ್ರಾ ರಮೇಶ್ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರಮುಖರು‌ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!