ಪ್ರತಿಭಟನೆ

ಅಖಿಲ‌ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ

ಕುಶಾಲನಗರ, ಸೆ 05: ದೇಶಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಕೊಡಗು‌ ಜಿಲ್ಲಾ
ಅಖಿಲ‌ ಭಾರತ ಕ್ರಾಂತಿಕಾರಿ ಮಹಿಳಾ ಸಂಘಟನೆ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಯಿತು.
ಕುಶಾಲನಗರ ತಾಲೂಕು ತಹಸೀಲ್ದಾರ್ ಕಛೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರ‌ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ದಿಕ್ಕಾರ ಕೂಗಲಾಯಿತು. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಧಿಕ್ಕಾರ ಕೂಗಿ ಆಕ್ರೋಷ ವ್ಯಕ್ತಪಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಅನಿತಾ, ದೇಶದಲ್ಲಿ ಬಡ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ನ್ಯಾಯ ದೊರಕುತ್ತಿಲ್ಲ. ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಒದಗಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿಫಲವಾಗಿದೆ. ಕನಿಷ್ಠ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಕೂಡ ಮಾಡಿಲ್ಲ. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು. ಸೌಜನ್ಯ ಪ್ರಕರಣದ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ದೇಶದಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸೌಜನ್ಯ ಪ್ರಕರಣ, ಹರಿಯಾಣದಲ್ಲಿ ಕ್ರೀಡಾಮಂತ್ರಿಯಿಂದ ಮಹಿಳಾ ಕ್ರೀಡಾಪಟುಗಳ ಮೇಲೆ ದೌರ್ಜನ್ಯ, ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಧರ್ಮಸ್ಥಳದಲ್ಲಿ ದಾಖಲಾಗಿರುವ 400 ಕ್ಕೂ ಅಧಿಕ ಮಹಿಳೆಯರ‌ ಅಸಹಜ ಸಾವಿನ ಪ್ರಕರಣಗಳು ಪತ್ತೆಯಾಗಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರನ್ನು ಶಿಕ್ಷಿಸುವ ಬದಲು ರಕ್ಷಣೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು. ಹಿಂದೂ ಹಾಗೂ ಸನಾತನ ಧರ್ಮದ ನಡುವೆ ವ್ಯತ್ಯಾಸವಿದ್ದು, ಸನಾತನ ಧರ್ಮದಲ್ಲಿ ಜಾತಿ ತಾರತಮ್ಯ ಹೆಚ್ಚಿನ ಮಟ್ಟದಲ್ಲಿ ಕಾಣಬಹುದು. ಮಹಿಳೆಯರು, ದಲಿತರು, ಆದಿವಾಸಿಗಳಿಗೆ ಇಲ್ಲಿ ಸಮಾನತೆ ಇಲ್ಲ ಎಂದ ಅವರು, ಮಹಿಳೆಯರ ಮೇಲೆ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಿದೆ. ಕೊಲೆಗಡುಕರನ್ನು ರಕ್ಷಣೆ ಮಾಡುವವರನ್ನು ಪತ್ತೆಹಚ್ಚಬೇಕಿದೆ ಎಂದರು.
ಡಿಎಸ್ಎಸ್ ಸಂಚಾಲಕ ಕೆ.ಬಿ.ರಾಜು ಮಾತನಾಡಿದರು.
ಈ ಸಂದರ್ಭ ಮಹಿಳಾ ಸಂಘಟನೆ ಪ್ರಮುಖರಾದ ಇಂದಿರಾ, ಸೌಂದರ್ಯ, ರಾಧಾ,
ಸುಮಿ, ಮಂಜುಳಾ, ಗೌರಮ್ಮ, ಸಾವಿತ್ರಮ್ಮ, ರೈತ ಸಂಘದ ಪ್ರಕಾಶ್, ಮುತ್ತಣ್ಣ, ಬಾಬು ಮತ್ತಿತರರು ಇದ್ದರು.
ಮಹಿಳೆಯರಿಗೆ ರಕ್ಷಣೆ ಹಾಗೂ ನೊಂದವರಿಗೆ ನ್ಯಾಯ ಒದಗಿಸುವಂತೆ ಕೋರಿ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ‌ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!