ಕುಶಾಲನಗರ, ಆ 20: ನಬಾರ್ಡ್ ಪ್ರಾಯೋಜಕತ್ವದಲ್ಲಿ ರೂ 3 ಕೋಟಿ 7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ
ನಂಜರಾಯಪಟ್ಟಣ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಬಹುಸೇವಾ ಕೇಂದ್ರದ ಗೋದಾಮು, ಮಳಿಗೆಗಳು, ನೂತನ ಕಛೇರಿ, ಆಡಳಿತ ಸಭಾಂಗಣ ಮತ್ತು ನೂತನ ಸಹಕಾರ ಭವನ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ನೂತನ ಮಳಿಗೆ ಹಾಗೂ ಗೋದಾಮನ್ನು ಸಂಸದ ಪ್ರತಾಪ್ ಸಿಂಹ ಲೋಕಾರ್ಪಣೆಗೊಳಿಸಿದರು. ನೂತನ ಲಿಫ್ಟ್ ಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಚಾಲನೆ ನೀಡಿದರು. ಕಛೇರಿ ಮತ್ತು ಬ್ಯಾಂಕಿಂಗ್ ಕೌಂಟರ್ ಅನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೋಡಂದೇರ ಪಿ.ಬಾಂಡ್ ಗಣಪತಿ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಂಜರಾಯಪಟ್ಟಣ ಗ್ರಾಮೀಣ ಬ್ಯಾಂಕ್ ನ ನೂತನ ಸುಸಜ್ಜಿತ ಕಟ್ಟಡ ಅತ್ಯಂತ ಆಕರ್ಷಣೀಯವಾಗಿದೆ.
ಸಹಕಾರ ಸಂಘಗಳ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದಲ್ಲಿ ಇಂತಹ ಉತ್ತಮ ಆಸ್ತಿಗಳನ್ನು ಗಳಿಸಬಹುದು. ನಬಾರ್ಡ್ ನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಇಂತಹ ಉತ್ತಮ ಕಟ್ಟಡಗಳ ನಿರ್ಮಾಣ ಸಾಧ್ಯ. ನಂಜರಾಯಪಟ್ಟಣ ಭಾಗದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಹೊಂದಿರುವ ಹಿನ್ನಲೆಯಲ್ಲಿ ನೂತನ ಅಂಗಡಿ ಮಳಿಗೆಗಳು, ಸಭಾಂಗಣ ಇದಕ್ಕೆ ಪೂರಕವಾಗಿ ನಿರ್ಮಾಣಗೊಂಡಿರುವುದು ಸುತ್ತಮುತ್ತಲಿನ ಗ್ರಾಮಗಳ ಬೆಳವಣಿಗೆಗೆ, ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಮೈಸೂರು-ಕುಶಾಲನಗರ ಚತುಷ್ಪತ ರಸ್ತೆ ಕಾಮಗಾರಿ ಮುಂದಿನ 16 ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು. ಆನಂತರ ಈ ಭಾಗದ ಭೂಮಿಗೆ ಉತ್ತಮ ಬೆಲೆ ಉಂಟಾಗುವ ಕಾರಣ ಯಾರೂ ಕೂಡ ಜಮೀನು ಮಾರಾಟ ಮಾಡದಂತೆ ಸಲಹೆ ನೀಡಿದರು. ಇಂದಿನ ಕಾಂಗ್ರೆಸ್ ಸರಕಾರ ಸೂಕ್ತವಾಗಿ ಸ್ಪಂದಿಸಿದಲ್ಲಿ ಕುಶಾಲನಗರದವರೆಗೆ ರೈಲ್ವೇ ಸಂಪರ್ಕ ಅನುಷ್ಠಾನಗೊಳ್ಳಲಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ರಾಜ್ಯ ಹಾಗೂ ರಾಷ್ಟಮಟ್ಟದಲ್ಲಿ ಕೊಡಗಿನ ಸಹಕಾರ ಕ್ಷೇತ್ರ ಛಾಪು ಮೂಡಿಸಿದೆ. ಕೊಡಗಿನ ಸಹಕಾರ ಸಂಘಗಳು ತನ್ನ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ಕೊಡಗು ಸಹಕಾರ ಸಂಘಗಳು ಪರಸ್ಪರ ಒಂದಕ್ಕೊಂದು ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಸೇವೆಯನ್ನು ಸದಸ್ಯರಿಗೆ ಒದಗಿಸುತ್ತಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದರು.
ಸಹಕಾರ ಸಂಘದ ಅಧ್ಯಕ್ಷ ಬಿ.ಸಿ.ಮುರಳಿ ಮಾದಯ್ಯ ಅಧ್ಯಕ್ಷತೆ ವಹಿಸಿದ್ದರು.
ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಸದಸ್ಯ ಆರ್.ಕೆ.ಚಂದ್ರ, ಕೊಡಗು ನಿರ್ಮಿತಿ ಕೇಂದ್ರದ ಎಂಜಿನಿಯರ್ ಸುಖೇಶ್,ಯಶಸ್ವಿನಿ ಯೋಜನೆಯ ಸಂಯೋಜಕ ಚೇತನ್, ಸಂಘದ ಉಪಾಧ್ಯಕ್ಷ ಬಿ.ಎನ್.ಧನಪಾಲ, ನಿರ್ದೇಶಕರಾದ ಡಿ.ಎಲ್.ಮಹೇಶ್ಚಂದ್ರ, ಪಿ.ಬಿ.ಅಶೋಕ,ಬಿ.ಎನ್.ಕಾಶಿ,ಕೆ.ಡಿ.ದಾದಪ್ಪ,ವಿ.ಎಸ್.ರಾಜಪ್ಪ,ಕೆ.ಜಿ.ಲೋಕನಾಥ್, ಎಚ್.ಎನ್.ಕಮಲಮ್ಮ,ಎಸ್.ಬಿ.ಅನಿತಾ,ಹೆಚ್.ಜೆ.ಕೃಷ್ಣ ಸಹಕಾರ ಸಂಘಗಳ ಮೇಲ್ವಿಚಾರಕ ವಿ.ಸಿ.ಅಜಿತ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ಧನಂಜಯ ಇದ್ದರು.
Back to top button
error: Content is protected !!