ಕುಶಾಲನಗರ, ಆ 11: ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಕುಶಾಲನಗರದಲ್ಲಿ ಈ ತಿಂಗಳ 14ರಂದು ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕುಶಾಲನಗರ ತಾಲೂಕು ಸಂಚಾಲಕರಾದ ಎಲ್ ಹರೀಶ್ ತಿಳಿಸಿದ್ದಾರೆ.
ಅವರು ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು 1947 ರ ಆಗಸ್ಟ್ 14ರ ಮಧ್ಯರಾತ್ರಿ ಭಾರತ ದೇಶ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತ ಕಳೆದು ಹೋದ ಭಾಗಗಳನ್ನೆಲ್ಲ ಮತ್ತೆ ಒಂದುಗೂಡಿಸುವ ಬಗ್ಗೆ ನಾಗರಿಕರಿಗೆ ನೆನಪಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಕುಶಾಲನಗರದಲ್ಲಿ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಮುಖ್ಯ ರಸ್ತೆ ಮೂಲಕ ಹೊರಟು ರಥಬೀದಿ, ಹಳೆಯ ಮಾರುಕಟ್ಟೆ ರಸ್ತೆ ನಂತರ ಟೌನ್ ಕಾಲೋನಿ ರಸ್ತೆಯಿಂದಾಗಿ ಐ ಬಿ ರಸ್ತೆ ಮೂಲಕ ರೈತ ಸಹಕಾರ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಂಪರ್ಕ ಪ್ರಮುಖರಾದ ಚಾಮೆರ ಪ್ರದೀಪ್ ಮಾತನಾಡಿ, ಜಿಲ್ಲೆಯ ಆರು ಕಡೆಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ನಿಮಿತ್ತ ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರದಲ್ಲಿ 14ರಂದು ಸಂಜೆ 7 ಗಂಟೆಗೆ ಮೆರವಣಿಗೆ ನಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಂದಾಜು 1000 ಸಂಖ್ಯೆಯಲ್ಲಿ ದೇಶಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮ ಮಾಜಿ ಸೈನಿಕರಾದ ಡಿ ಕೆ ಚಿನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಪರ್ಕ ಪ್ರಮುಖರಾದ ಯಾದವ್ ಕೃಷ್ಣ ಅವರು ದಿಕ್ಸೂಚಿ ಭಾಷಣ ಮಾಡಲಿರುವರು ಎಂದು ಹೇಳಿದರು.
ಹಿಂದು ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖರಾದ ಕೆ ವಿ ರಾಜೀವ್, ತಾಲೂಕು ಸಂಪರ್ಕ ಪ್ರಮುಖರಾದ ವಿ ಎಚ್ ಪ್ರಶಾಂತ್, ಸಹ ಸಂಚಾಲಕರಾದ ಪ್ರಜ್ವಲ್ ಇದ್ದರು.
Back to top button
error: Content is protected !!