ಪ್ರಕಟಣೆ
ಕಾರ್ಮಿಕ ಕಾಯ್ದೆ ನಿಯಮ ಪ್ರಕಾರ ನೋಂದಣಿ ಮಾಡಲು ಕರೆ
ಕುಶಾಲನಗರ, ಜು 17:ಪ್ರತಿಯೊಬ್ಬ ವ್ಯಾಪಾರ ವಹಿವಾಟು ಮಾಡುವ ಉದ್ಯಮಿಗಳು ಕಾರ್ಮಿಕ ಕಾಯಿದೆ ನಿಯಮ ಪ್ರಕಾರ ನೋಂದಣಿ ಮಾಡಿಸಿಕೊಂಡು ಪರವಾನಿಗೆ ಪಡೆಯಬೇಕು ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಮತ್ತು ಇಂಡಸ್ಟ್ರೀಸ್ ಕುಶಾಲನಗರ ಸ್ಥಾನಿಯ ಸಮಿತಿ ಅಧ್ಯಕ್ಷರಾದ ಅಮೃತರಾಜ್ ತಿಳಿಸಿದ್ದಾರೆ.
ಕುಶಾಲನಗರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ವ್ಯಾಪಾರಿಗಳು ಮಾಹಿತಿಯ ಕೊರತೆಯೊಂದಿಗೆ ಕಾನೂನಿನಡಿ ಸಿಲುಕಿ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಘದ ಮೂಲಕ ಮಾಹಿತಿ ಕಾರ್ಯಗಾರ ನಡೆಸಿದರೂ ವರ್ತಕರು ಎಚ್ಚೆತ್ತುಕೊಂಡಿಲ್ಲ. ಈ ಸಂಬಂಧ ಪ್ರತಿಯೊಂದು ವ್ಯಾಪಾರ ವಹಿವಾಟು ಮಾಡುವ ಸ್ಥಳಗಳು ಕಾರ್ಮಿಕ ಕಾಯ್ದೆ ನಿಯಮ ಪ್ರಕಾರ ನೋಂದಣಿ ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ಪ್ರತಿ ಐದು ವರ್ಷಗಳಿಗೆ ಪರವಾನಿಗೆಯನ್ನು ನವೀಕರಣ ಮಾಡಬೇಕು ಎಂದು ತಿಳಿಸಿದ್ದಾರೆ.
ತುಂಬಿದ ಅರ್ಜಿ ದ್ವಿಪ್ರತಿಯೊಂದಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಜಿಎಸ್‌ಟಿ ಸರ್ಟಿಫಿಕೇಟ್ ಅಥವಾ ಲೈಸೆನ್ಸ್ ಪ್ರತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಒದಗಿಸಿ ನೋಂದಣಿ ಮಾಡಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭ ಮಾತನಾಡಿದ ಅವರು ಬಾಲಕಾರ್ಮಿಕ ಕಾಯ್ದೆಯಲ್ಲಿ ಕಾನೂನು ಉಲ್ಲಂಘನೆ ಮಾಡಿದರೆ ಭಾರಿ ಮೊತ್ತದ ದಂಡ ಪಾವತಿ ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಮಾಹಿತಿ ಒದಗಿಸಿದರು.
ಈ ಸಂಬಂಧ ಈ ತಿಂಗಳ 29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ಹೋಟೆಲ್ ಕನ್ನಿಕಾ ಇಂಟರ್ನ್ಯಾಷನಲ್ ಆವರಣದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಅರ್ಜಿ ಸ್ವೀಕರಿಸಲಿದ್ದಾರೆ. ವ್ಯಾಪಾರಿಗಳು ಇದರ ಉಪಯೋಗ ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಕಾರ್ಮಿಕ ಇಲಾಖೆಗೆ ನೀಡುವ ಅರ್ಜಿಗಳನ್ನು ಕುಶಾಲನಗರ ಬೈಪಾಸ್ ರಸ್ತೆಯ ಪೂರ್ಣ ಶ್ರೀ ಫರ್ನಿಚರ್ಸ್, ಐ ಬಿ ರಸ್ತೆಯ ಒಡೆಸಿ ಕಲರ್ ಲ್ಯಾಬ್ ಮತ್ತು ಬೈಪಾಸ್ ರಸ್ತೆಯ ಕಾರ್ಮಿಕ ಅಧಿಕಾರಿಗಳ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ನ ಮಹಾಸಭೆ ಕುಶಾಲನಗರದ ವಾಸವಿ ಮಹಲ್ ಹಿಂಭಾಗದ ಸಭಾಂಗಣದಲ್ಲಿ ಈ ತಿಂಗಳ 30 ರಂದು ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚೇಂಬರ್ ಆಫ್ ಕಾಮರ್ಸ್ ಜಿಲ್ಲಾ ನಿರ್ದೇಶಕರಾದ ಎಸ್. ಕೆ. ಸತೀಶ್, ಖಜಾಂಚಿ ಎನ್. ವಿ. ಬಾಬು, ಸಹ ಕಾರ್ಯದರ್ಶಿ ಕೆ. ಎಸ್. ನಾಗೇಶ್ ಇದ್ದರು.