ಕುಶಾಲನಗರ, ಜು 16: ಕುಶಾಲನಗರ ಸರಕಾರಿ ಜೂನಿಯರ್ ಕಾಲೇಜು ಮುಂಭಾಗದ ಅಪಾಯಕಾರಿ ತಿರುವಿನ ರಸ್ತೆ ಅಗಲೀಕರಣ ಮೂಲಕ ಸುಗಮ ಸಂಚಾರಕ್ಕೆ ಪುರಸಭೆ ಸದಸ್ಯ ಎಂ.ಕೆ.ಸುಂದರೇಶ್ ಕ್ರಮಕೈಗೊಂಡಿದ್ದಾರೆ.
ಕರಿಯಪ್ಪ ಬಡಾವಣೆ, ಹೊಸ ಹೌಸಿಂಗ್ ಬೋರ್ಡ್ ಗೆ ತೆರಳುವ ಮಾರ್ಗದಲ್ಲಿರುವ ಕಾಲೇಜು ಆವರಣದಲ್ಲಿ ವಾಹನಗಳ ದಟ್ಟಣೆ ಅಧಿಕವಾಗುತ್ತಿದ್ದು ಈ ತಿರುವು ಕೂಡ ಕಿರಿದಾದ ರಸ್ತೆಯಿಂದ ಅಪಾಯಕಾರಿ ಸ್ಥಿತಿಯಲ್ಲಿತ್ತು. ಶಾಲಾ ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳ ಪೋಷಕರು, ವ್ಯಾಯಾಮ, ಕ್ರೀಡಾಕೂಟಕ್ಕೆ ಈ ಮೈದಾನಕ್ಕೆ ಆಗಮಿಸುವವರ ವಾಹನಗಳ ನಿಲುಗಡೆಗೆ ಕೂಡ ಸ್ಥಳಾವಕಾಶದ ಕೊರತೆ ಎದುರಾಗಿತ್ತು. ಕಿರಿದಾದ ತಿರುವಿನಲ್ಲಿ ಆಗಾಗ್ಯೆ ಅಪಘಾತಗಳು ಸಂಭವಿಸುತ್ತಿದ್ದವು.
ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಚರಿಸುವ ಸಂದರ್ಭ ವಾಹನಗಳ ಸಂಚಾರಕ್ಕೆ ಇಲ್ಲಿ ಅನಾನುಕೂಲ ಉಂಟಾಗುತ್ತಿತ್ತು. ಇದನ್ನು ಮನಗಂಡ ಪುರಸಭೆಯ 15ನೇ ವಾರ್ಡ್ ಸದಸ್ಯ ಸುಂದರೇಶ್ ಅವರು ರಸ್ತೆ ಬದಿಯ ಆಲದ ಮರದ ಸುತ್ತಲೂ ಕಾಡುಗಿಡಗಳನ್ನು ತೆರವು ಗೊಳಿಸಿ ಆ ಪ್ರದೇಶವನ್ನು ವಿಶಾಲವಾಗಿಸುವಲ್ಲಿ ಕ್ರಮಕೈಗೊಂಡಿದ್ದಾರೆ.
ಶಾಸಕ ಮಂತರ್ ಗೌಡ ಅವರ ಗಮನಕ್ಕೆ ಕೂಡ ಈ ವಿಚಾರ ತರಲಾಗಿದ್ದು, ರಸ್ತೆ ಅಗಲೀಕರಣಕ್ಕೆ ಸೂಚನೆ ನೀಡಿದ ಮೇರೆಗೆ ಇದೀಗ ತಾತ್ಕಾಲಿಕವಾಗಿ ರಸ್ತೆಯನ್ನು ಅಗಲೀಕರಣಗೊಳಿಸಿ ಆಲದ ಮರದ ಸುತ್ತಲೂ ಕಟ್ಟೆ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕಾಂಕ್ರೀಟಿಕರಣಗೊಳಿಸುವುದಾಗಿ ಸುಂದರೇಶ್ ತಿಳಿಸಿದರು.
Back to top button
error: Content is protected !!