ಮನವಿ

ಸೋಮದೇವನಕೆರೆ ಒತ್ತುವರಿ: ಸಂರಕ್ಷಣೆಗೆ ಒತ್ತಾಯಿಸಿ ಕಾಂಗ್ರೆಸ್ ಕಿಸಾನ್ ಘಟಕ‌ ಮನವಿ

ಕುಶಾಲನಗರ, ಮೇ 19: ಕುಶಾಲನಗರದ ಪುರಾತನ ಕಾಲದ ಸೋಮದೇವನ‌ ಕೆರೆ ಒತ್ತುವರಿಯಾಗುತ್ತಿದ್ದು, ಇದನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್ ನ ಕೊಡಗು ಜಿಲ್ಲಾ ಕಿಸಾನ್ ಘಟಕದ ಪ್ರಮುಖರು ಕುಶಾಲನಗರ ತಾಲೂಕು ತಹಸೀಲ್ದಾರ್ ಗೆ ಮನವಿ ಸಲ್ಲಿಸಿದ್ದರು.
ಮುಳ್ಳುಸೋಗೆ ಗ್ರಾಮದ ಸೋಮೇಶ್ವರ ದೇವಾಲಯ ಬಳಿ ಸರ್ವೆ ನಂ.59 ರಲ್ಲಿರುವ 1.64 ಎಕ್ರೆ ಪ್ರದೇಶದಲ್ಲಿರುವ ಈ ಕೆರೆ ಮಧ್ಯದಲ್ಲಿ ಮಣ್ಣು ತುಂಬಿ ರಸ್ತೆ ನಿರ್ಮಿಸಿಕೊಳ್ಳಲಾಗಿದೆ. ಮತ್ತೆ ಕೆಲವರು ಕೆರೆ ಜಾಗವನ್ನು ಅತಿಕ್ರಮಿಸಿಕೊಂಡಿದ್ದು ಕೂಡಲೆ ಕೆರೆ ಸರ್ವೆ ಕಾರ್ಯ ನಡೆಸಿ ಕೆರೆ ಪ್ರದೇಶ ಸಂರಕ್ಷಿಸುವಂತೆ ತಹಸೀಲ್ದಾರ್ ಟಿ.ಎಂ.ಪ್ರಕಾಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಘಟಕದ ಅಧ್ಯಕ್ಷ ವಿ.ಜೆ.ನವೀನ್, ಕುಶಾಲನಗರಕ್ಕೆ ಹೆಸರುವಾಸಿಯಾಗಿದ್ದ ಸೋಮದೇವನ ಕೆರೆ ಇಂದು ಅವನತಿ ಹೊಂದುತ್ತಿದೆ. ಆಡಳಿತ ವರ್ಗ ಈ ಕೆರೆ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಕೆರೆ ಕಣ್ಮರೆಯಾಗುವ ಎಲ್ಲಾ ಲಕ್ಷ್ಮಣಗಳಿದೆ. ಕೆರೆ ಸಂರಕ್ಷಣೆ ಮೂಲಕ ಅಂತರ್ಜಲ ವೃದ್ದಿ, ಪ್ರಾಣಿ ಪಕ್ಷಿ, ಜಾನುವಾರುಗಳಿಗೆ ನೀರಿನ ಅಭಾವ ನೀಗಲಿದೆ ಎಂದರು.
ಈ ಸಂದರ್ಭ ಘಟಕದ ಪ್ರಮುಖರಾದ ಸ್ವರೂಪ್, ದಿವಾಕರ್, ಮಂಜು, ಪುನಿತ್, ಪ್ರಸನ್ನ, ವಿನಯ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!