ಕುಶಾಲನಗರ, ಮಾ 09: ಸಹಕಾರ ಕ್ಷೇತ್ರದಲ್ಲಿ 25 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಕುಶಾಲನಗರದ ಸಹಕಾರಿ ಟಿ.ಆರ್.ಶರವಣಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.
ಕುಶಾಲನಗರದ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿರುವ ಟಿ.ಆರ್.ಶರವಣಕುಮಾರ್ ಅವರು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಸಂದಿದ್ದು, ಈ ಅವಧಿಯಲ್ಲಿ ಸಹಕಾರ ಕ್ಷೇತ್ರಕ್ಕೆ, ಕುಶಾಲನಗರದ ಸಂಘಗಳಿಗೆ ಸಲ್ಲಿಸಿದ ಸ್ಮರಣೀಯ, ಅಮೋಘ ಸೇವೆ ಪರಿಗಣಿಸಿ ಗುರುವಾರ ಎರಡೂ ಸಂಘಗಳ ಆಡಳಿತ ಮಂಡಳಿ, ಸಿಬ್ಬಂದಿಗಳು ಮತ್ತು ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಬೆಳಗ್ಗೆ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಶರವಣಕುಮಾರ್ ಅವರನ್ನು ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.
ರೈತ ಸಹಕಾರ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಕೊಡಗು ಜಿಲ್ಲಾ ಕೇಂದ್ರ ಸಹಕಾರ. ಬ್ಯಾಂಕ್ ಅಧ್ಯಕ್ಷ ಕೆ.ಪಿ.ಬಾಂಡ್ ಗಣಪತಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶರವಣಕುಮಾರ್ ಅವರು ಸಹಕಾರ ಕ್ಷೇತ್ರದ ಮೇಲಿಟ್ಟಿರುವ ಅಭಿಮಾನವನ್ನು ಈ ಕಾರ್ಯಕ್ರಮ ಸಾಕ್ಷೀಕರಿಸಿದೆ. ಪಕ್ಷಾತೀತ, ರಾಜಕೀಯ ರಹಿತವಾಗಿ ಒಂದು ಕಾರ್ಯಕ್ರಮ ಸಂಘಟಿಸುವುದು ಸಾಮಾನ್ಯ ಸಂಗತಿಯಲ್ಲ. ಕುಶಾಲನಗರದ ಜನತೆಯ ಪ್ರೀತಿ, ವಿಶ್ವಾಸ ಈ ಕಾರ್ಯಕ್ರಮದಲ್ಲಿ ಕಂಡುಬರುತ್ತಿದೆ ಎಂದರು. ಕೊಡಗು ಜಿಲ್ಲೆಗೆ ಮಾದರಿ ಎನ್ನುವಂತಹ ಸಹಕಾರ ಕಟ್ಟಡವಾಗಿ ಕುಶಾಲನಗರ ಪ್ರಾಥಮಿಕ ಪತ್ತಿನ ಸಹಕಾರ ಸಂಘವನ್ನು ಅಭಿವೃದ್ದಿಪಡಿಸಿರುವುದು ಶ್ಲಾಘನೀಯ ವಿಚಾರ ಎಂದರು.
ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ ಅವರು, ಟಿ.ಆರ್.ಶರವಣಕುಮಾರ್ ಅವರ ಸಾಧನೆಯ ಹಾದಿಯ ಬಗ್ಗೆ ವಿವರಗಳುಳ್ಳ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದರು.
ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.
ಕೈಗಾರಿಕೋದ್ಯಮಿಗಳ ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕ ಆರ್.ಕೆ.ನಾಗೇಂದ್ರಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಟಿ.ಆರ್.ಶರವಣಕುಮಾರ್ ಅವರ ವ್ಯಕ್ತಿ ಪರಿಚಯ ಮಾಡಿದರು. ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಘೋಷಿಸುವಂತೆ ಸರಕಾರವನ್ನು ಆಗ್ರಹಿಸಿದರು.
ಸಹಕಾರ ಸಂಘಗಳು, ವಿವಿಧ ಸಂಘಟನೆಗಳಿಂದ ಟಿ.ಆರ್.ಶರವಣಕುಮಾರ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಟಿ.ಆರ್.ಶರವಣಕುಮಾರ್ ಮಾತನಾಡಿದರು.
ಅಭಿನಂದನಾ ಸಮಿತಿ ಅಧ್ಯಕ್ಷ ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ, ವಿ.ಎಸ್.ಆನಂದಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್, ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ಸಮಾಜ ಸೇವಕ ಡಾ.ಮಂಥರ್ ಗೌಡ, ನಿವೃತ್ತ ಶಿಕ್ಷಕ ನಜೀರ್ ಮಾಸ್ಟರ್, ಸಹಕಾರ ಸಂಘಗಳ ಉಪನಿಭಂದಕ ಜಿ.ಆರ್.ವಿಜಯಕುಮಾರ್, ನಿವೃತ್ತ ಜಂಟಿ ನಿಭಂದಕ ಎಸ್.ಎಚ್.ಸಂತೋಷ್ ಕುಮಾರ್, ಕೈಗಾರಿಕೋದ್ಯಮಿಗಳ ವೃತ್ತಿನಿರತರ ಸಂಘದ ಉಪಾಧ್ಯಕ್ಷ ಎಂ.ಎಂ.ಶಾಹಿರ್ ವೇದಿಕೆಯಲ್ಲಿದ್ದರು.
ವಿವಿಧ ಸಂಘಸಂಸ್ಥೆ, ಸಂಘಟನೆಗಳ ಪ್ರಮುಖರು, ಸಹಕಾರ ಸಂಘಗಳ ನಿರ್ದೇಶಕರು, ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.
Back to top button
error: Content is protected !!