ಕುಶಾಲನಗರ, ಮಾ 03 ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಹಾನಗಲ್ಲು ಶ್ರೀ ಕುಮಾರಸ್ವಾಮಿಗಳ ಮತ್ತು ಡಾ.ಶ್ರೀ ಶ್ರೀ ಶಿವಕುಮಾರಸ್ವಾಮಿ ಜಯಂತಿ ಮತ್ತು ಧಾರ್ಮಿಕ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಮಹಾಸಭಾದ ಅಧ್ಯಕ್ಷ ಎಚ್.ವಿ.ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಉದ್ಘಾಟಿಸಿದರು. ಹಾನಗಲ್ಲು ಶ್ರೀ ಕುಮಾರಸ್ವಾಮೀಜಿ, ಡಾ.ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು.
ನಂತರ ಮಾತನಾಡಿದ ಚಂದ್ರಮೌಳಿ, ಸಮಾಜಕ್ಕೆ ವೀರಶೈವ ಲಿಂಗಾಯತರ ಕೊಡುಗೆ ಅಪಾರವಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿಯೂ ಸಮುದಾಯದ ಮುಖಂಡರು ತಮ್ಮದೇ ಛಾಪು ಮೂಡಿಸಿದ್ದಾರೆ. ಯುವ ಪೀಳಿಗೆ ಇತಿಹಾಸ ಅರಿಯುವ ಕೆಲಸ ಮಾಡಬೇಕಿದೆ. ಕೊಡಗನ್ನು ಆಳಿದ ಅರಸರು, ರಾಜಕೀಯ ನೇತಾರರು ಜಿಲ್ಲೆಯನ್ನು ಅತ್ಯಂತ ಸಮೃದ್ದಗೊಳಿಸಿದ್ದಾರೆ. ರಾಜ್ಯದಲ್ಲಿ ಕೂಡ ರಾಜಕೀಯ ರಹಿತವಾಗಿ ನೋಡಿದಾಗ ಸಮುದಾಯಕ್ಕೆ ಸೇರಿದ ಜನಪ್ರತಿನಿಧಿಗಳು ಕಳಂಕ ರಹಿತ ಸೇವೆ ಒದಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವೀರಶೈವ ಲಿಂಗಾಯತ ಸಮುದಾಯದ ಬೇಡಿಕೆಗಳ ಈಡೇರಿಕೆಗೆ, ಉತ್ತಮ ಸ್ಥಾನಮಾನಕ್ಕೆ ಸಮುದಾಯದ ಪ್ರತಿನಿಧಿಗೆ ರಾಜಕೀಯ ಬಲ ತುಂಬಬೇಕಿದೆ ಎಂದರು.
ದಿವ್ಯ ನೇತೃತ್ವ ವಹಿಸಿದ್ದ ಮಹಾಸಭಾದ ಗೌರವಾಧ್ಯಕ್ಷ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳಾಡಿದರು. ಕಳೆದ ನಾಲ್ಕೈದು ವರ್ಷಗಳಿಂದ ಮಹಾಸಭಾದ ಕೊಡಗು ಜಿಲ್ಲಾ ಘಟಕ ಅತ್ಯುತ್ತಮ ರೀತಿಯಲ್ಲಿ ಸಂಘಟನೆ ಕಾರ್ಯಕೈಗೊಂಡಿದೆ. ಇತರೆ ಜಿಲ್ಲೆಗಳಿಗೆ ಮಾದರಿ ರೀತಿಯಲ್ಲಿ ಕ್ರೀಡೆ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ ವಿಚಾರ. ಮುಂಬರುವ ಚುನಾವಣೆಯಲ್ಲಿ ಸಮುದಾಯಕ್ಕೆ ಬೆಂಬಲವಾಗಿ ನಿಲ್ಲುವಂತಹ ಯೋಗ್ಯರಿಗೆ ಸಮುದಾಯದ ಅತ್ಯಮೂಲ್ಯ ಮತ ನೀಡಲು ಸೂಚಿಸಿದರು.
ಮಹಾಸಭಾದ ರಾಜ್ಯ ಘಟಕದ ಕೋಶಾಧ್ಯಕ್ಷ ವರುಣ ಮಹೇಶ್ ಮಾತನಾಡಿ, ವಿವಿಧ ಜಿಲ್ಲೆಗಳಲ್ಲಿ ಸಮುದಾಯಕ್ಕೆ ಸಂಬಂಧಿಸಿದ ಭವನಗಳ ಕೊರತೆ ಕಾಡುತ್ತಿದೆ. ಸಮುದಾಯ ಭವನ, ಕಛೇರಿ ಕಟ್ಟಡಗಳ ನಿರ್ಮಾಣಕ್ಕೆ ಸಮುದಾಯ ಬಾಂಧವರು ಸಹಕಾರ ಒದಗಿಸುವಂತೆ ಮನವಿ ಮಾಡಿದರು.ದಿವ್ಯ ಸಾನಿಧ್ಯ ವಹಿಸಿದ್ದ ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಂಘಟನೆ ಮೂಲಕ ಸಮುದಾಯ ಅತ್ಯಂತ ಬಲಶಾಲಿಯಾಗಿ ಒಗ್ಗಟ್ಟು ಪ್ರದರ್ಶಿಸಿದಲ್ಲಿ ನಮಗೆ ಬೇಕಾದ ಸ್ಥಾನಮಾನ ದಕ್ಕಿಸಿಕೊಳ್ಳಲು ಸಾಧ್ಯ ಎಂದರು.ಕೊಡ್ಲಿಪೇಟೆ ಕಲ್ಮಠದ ಶ್ರೀ ಶ್ರೀ ಮಹಾಂತಸ್ವಾಮೀಜಿ, ಶನಿವಾರಸಂತೆ ಮುದ್ದಿನಕಟ್ಟೆ ಮಠಾಧೀಶ ಶ್ರೀ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮುದಾಯದವರು ಧರ್ಮಾಭಿಮಾನ ಬೆಳೆಸಿಕೊಂಡು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿತರಾಗಬೇಕೆಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.ಈ ಸಂದರ್ಭ ಮಹಾಸಭಾದ ರಾಜ್ಯ ಸಮಿತಿ ಕಾರ್ಯದರ್ಶಿ ರಾಜೇಶ್ವರಿ ನಾಗರಾಜು, ಕೊಡಗು ಘಟಕದ ಉಪಾಧ್ಯಕ್ಷರಾದ ಜಿ.ಎಂ.ಕಾಂತರಾಜು,ಎಸ್.ಎಸ್.ಸುರೇಶ್, ಅನು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಮೂರ್ತಿ, ಖಜಾಂಚಿ ಎಚ್.ಪಿ.ಉದಯಕುಮಾರ್, ಮಾಜಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಯುವ ಘಟಕ ಜಿಲ್ಲಾಧ್ಯಕ್ಷ ಮೋಕ್ಷಿಕ್ ರಾಜ್, ವಿವಿಧ ತಾಲೂಕು ಘಟಕದ ಅಧ್ಯಕ್ಷರಾದ ಮಧುಸೂದನ್, ಕೆ.ಎನ್.ಸಂದೀಪ್, ಆದರ್ಶ್, ಪ್ರದೀಪ್, ಕಟ್ಟಡ ಸ್ಥಳದಾನಿ ಎಂ.ಬಿ.ಬಸವರಾಜು, ಪಿರಿಯಾಪಟ್ಟಣ ಕಸಾಪ ಅಧ್ಯಕ್ಷ ನವೀನ್ ಸೇರಿದಂತೆ ಪ್ರಮುಖರಾದ ಧರ್ಮಪ್ಪ, ಮಹದೇವಪ್ಪ, ಅಕ್ಕನಬಳಗದ ಪ್ರಮುಖರು ಇದ್ದರು.
Back to top button
error: Content is protected !!