ಸಭೆ

ನಂಜರಾಯಪಟ್ಟಣ ಗ್ರಾಪಂ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮಸಭೆ

ಕುಶಾಲನಗರ, ಫೆ 21: ನಂಜರಾಯಪಟ್ಟಣ ಗ್ರಾಮಪಂಚಾಯತ್ ನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮಸಭೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪಂಚಾಯತ್ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಪಂಚಾಯತ್ ಪಿಡಿಒ ಕಲ್ಪ, ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಸವಲತ್ತುಗಳ ಹಂಚಿಕೆ, ಸಮುದಾಯದತ್ತ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂದ ಗ್ರಾಮಸ್ಥರು ತಮ್ಮ ಅಹವಾಲು, ಬೇಡಿಕೆಗಳನ್ನು ಸಲ್ಲಿಸಲು ಈ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಉದ್ಯೋಗ ಖಾತ್ರಿ ಯೋಜನೆಯ ಅಭಿಯಂತರ ಕಾರ್ತಿಕ್, ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳು, ಸೌಲಭ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಯೋಜನೆಗೆ ಸಂಬಂಧಿಸಿದ ಕುಂದುಕೊರತೆಗಳು ಬಗ್ಗೆ ಸಭೆಯ ಗಮನಕ್ಕೆ ತಂದ ಗ್ರಾಮಸ್ಥರು ಅಗತ್ಯ ಸಲಹೆಗಳನ್ನು ಪಡೆದುಕೊಂಡರು. ಕೈಗೊಳ್ಳಬೇಕಾದ ಕಾಮಗಾರಿಗಳಿಗಾಗಿ ಫಲಾನುಭವಿಗಳಿ ಅಧ್ಯಕ್ಷರಿಗೆ ಮನವಿ‌ ಪತ್ರ ಸಲ್ಲಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮಪಂಚಾಯತ್ ಅಧ್ಯಕ್ಷ ಸಿ.ಎಲ್.ವಿಶ್ವ, ಜನಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಮಸ್ಥರು ಪರಸ್ಪರ ಹೊಂದಾಣಿಕೆಯಿಂದ ಮುನ್ನಡೆದಲ್ಲಿ‌ ಮಾತ್ರ ಗ್ರಾಮದ ಅಭಿವೃದ್ದಿ ಸಾಧ್ಯ. ಗ್ರಾಮದ ಅಭಿವೃದ್ದಿಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಶ್ರಮದ ಜೊತೆ ಗ್ರಾಮಸ್ಥರ ಸಹಕಾರ ಅತಿ ಮುಖ್ಯ. ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಉದ್ಯೋಗ ಖಾತ್ರಿ ಯೋಜನೆಯಡಿಯ‌ ಕಾಮಗಾರಿಗಳು‌ ಕುಂಠಿತಗೊಂಡಿದೆ. ಸರಕಾರದ ಹೊಸ ಮಾರ್ಗಸೂಚಿ ಕಾರಣದಿಂದ ಈ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿ ಕಾಣುತ್ತಿಲ್ಲ ಎಂದರು. ಚುನಾವಣಾ ಪೂರ್ವ ತೀರ್ಮಾನದಂತೆ
ಗ್ರಾಮಪಂಚಾಯತ್ ಚುನಾಯಿತ ಜನಪ್ರತಿನಿಧಿಗಳು‌ ಯಾವುದೇ ರೀತಿಯ ಗುತ್ತಿಗೆ ಕಾಮಗಾರಿಗಳಲ್ಲಿ‌ ತೊಡಗಿಸಿಕೊಂಡಿಲ್ಲ.
ಗ್ರಾಮದ ಅಭಿವೃದ್ದಿಗೆ ಸಂಘಸಂಸ್ಥೆಗಳ ನೇತೃತ್ವದಲ್ಲಿ ಕಾಮಗಾರಿಗಳನ್ನು ಕೈಗೊಂಡ ಸಂದರ್ಭ ಫಲಾನುಭವಿಗಳು ಯಾವುದೇ ರೀತಿಯ ಮೋಸ, ವಂಚನೆಗೆ ಮುಂದಾಗದೆ ಪ್ರಾಮಾಣಿಕತೆ ತೋರಬೇಕಿದೆ ಎಂದು ಮನವಿ‌ ಮಾಡಿದರು.
ಆಸಕ್ತಿ, ಆದ್ಯತೆ ಮೇರೆಗೆ ಮಾತ್ರ ಅಗತ್ಯ ಕಾಮಗಾರಿಗಳನ್ನು ಸೇರ್ಪಡೆ ಮಾಡಲಾಗುವುದು. ಅಗತ್ಯ ಬೇಡಿಕೆಗಳನ್ನು ಕ್ರಿಯಾಯೋಜನೆಗೆ ಸೇರ್ಪಡೆ ಮಾಡಲಾಗುವುದು.
ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯ ಪಡೆದು ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿ ಚಿಂತನೆ ಹೊಂದುವಂತೆ ವಿಶ್ವ ಕರೆ ನೀಡಿದರು.
ಹೆದ್ದಾರಿಗಳಲ್ಲಿ ಬೀಡಾಡಿ ದನಗಳ ಹಾವಳಿಯಿಂದ ಪ್ರಾಣಹಾನಿ ಸಂಭವಿಸುತ್ತಿದ್ದು ಜಾನುವಾರುಗಳ ಮಾಲೀಕರು ಈ ಬಗ್ಗೆ ಅಗತ್ಯ ಗಮನ ಹರಿಸುವಂತೆ ಅವರು ವಿಶೇಷ ಮನವಿ ಮಾಡಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಸಮೀರ, ಸದಸ್ಯರಾದ ಆರ್.ಕೆ.ಚಂದ್ರ, ಲೋಕನಾಥ್, ರಕ್ಷಿತ್ ಕುಸುಮ, ಜಾಜಿ, ಗಿರಿಜಮ್ಮ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!