ಕುಶಾಲನಗರ, ಫೆ 21: ಕೊಡಗು ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಪಂಚರತ್ನ ಯೋಜನೆ ಬಗ್ಗೆ ಕುಶಾಲನಗರದಲ್ಲಿ ಪ್ರಚಾರ ಮಾಡಲಾಯಿತು.
ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ ನೇತೃತ್ವದ ತಂಡ ಕುಶಾಲನಗರದ ಅಂಗಡಿ ಮಳಿಗೆಗಳು, ಹೋಟೆಲ್ ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪಂಚರತ್ನ ಯೋಜನೆಯ ಕರಪತ್ರಗಳನ್ನು ಹಂಚುವ ಮೂಲಕ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಲಾಯಿತು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಲ್.ವಿಶ್ವ, ಕೊಡಗಿನಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಮತದಾರರು ಅಧಿಕಾರ ನೀಡಿದ್ದಾರೆ. ಈ ಬಾರಿ ಜೆಡಿಎಸ್ ಗೆ ಒಂದು ಅವಕಾಶ ನೀಡುವ ಮೂಲಕ ಕೊಡಗಿನ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಅವಕಾಶ ಕಲ್ಪಿಸಬೇಕಿದೆ.
ಕೊಡಗಿನಿಂದ ಎರಡು ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮವಹಿಸುತ್ತಿದ್ದಾರೆ.
ಕುಮಾರಸ್ವಾಮಿ ಅವರ ಅವಧಿಯಲ್ಲಿ ಜಾರಿಯಾದ ಜನಪರ ಯೋಜನೆಗಳು, ಸಾಧನೆಗಳ ಮಾಹಿತಿಯನ್ನು ಮನೆಮನೆಗೆ ತಲುಪಿಸಲಾಗುತ್ತಿದೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೊಡಗಿನಲ್ಲಿ ಎರಡು ಹೊಸ ತಾಲೂಕುಗಳನ್ನು ಘೋಷಿಸಲಾಯಿತು. ಪ್ರವಾಹ ಸಂತ್ರಸ್ತರಿಗೆ ಸೂರಿನ ಭಾಗ್ಯ ಕಲ್ಪಿಸಿದ್ದಾರೆ.
ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸುಸಜ್ಜಿತ ಆಸ್ಪತ್ರೆ, ಹೈಟೆಕ್ ಶಾಲೆ, ಸ್ತ್ರೀಶಕ್ತಿ, ರೈತರ ಸಾಲಮನ್ನಾ, ರಸಗೊಬ್ಬರ ಸಬ್ಸಿಡಿ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಅಭಿಲಾಷೆಯನ್ನು ಕುಮಾರಸ್ವಾಮಿ ಹೊಂದಿದ್ದಾರೆ. ಮತದಾರರು ಜೆಡಿಎಸ್ ಜೊತೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭ ಯುವ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ತೌಫೀಕ್, ನೆಲ್ಲಿಹುದಿಕೇರಿ ಶರತ್, ಉಪಾಧ್ಯಕ್ಷ ರಿಜ್ವಾನ್,
ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಪಿ.ಡಿ.ರವಿ, ತಾಲೂಕು ಯುವ ಘಟಕ ಅಧ್ಯಕ್ಷ ರಾಜು, ಪ್ರಮುಖರಾದ ಅಡ್ನಳ್ಳಿ ಸತೀಶ್, ಹೆಬ್ಬಾಲೆ ಶರತ್, ವಿನಯ್ ಮತ್ತಿತರರು ಇದ್ದರು.
Back to top button
error: Content is protected !!