ಕಾರ್ಯಕ್ರಮ
ಹೆಬ್ಬಾಲೆ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸ್ವ-ಸಹಾಯ ತಂಡಗಳ ಸಾಧನ ಸಮಾವೇಶ
ಕುಶಾಲನಗರ, ಫೆ 07: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಬಾಲೆ ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾಸಮಿತಿ ಹಾಗೂ ಪ್ರಗತಿ ಬಂದು ಸ್ವ-ಸಹಾಯ ಸಂಘ ಒಕ್ಕೂಟ ಜಂಟಿ ಆಶ್ರಯದಲ್ಲಿ ಕೌಟುಂಬಿಕ ಸೌಹಾರ್ದತೆ ಹಾಗೂ ಗ್ರಾಮ ಸುಭಿಕ್ಷೆಗಾಗಿ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸ್ವ-ಸಹಾಯ ತಂಡಗಳ ಸಾಧನ ಸಮಾವೇಶ ಸಿದ್ದಲಿಂಗಪುರ ಅರಿಸಿನಗುಪ್ಪೆ ಗ್ರಾಮದ ಮಂಜುನಾಥಸ್ವಾಮಿ ದೇವಾಲಯ ಆವರಣದಲ್ಲಿ ನಡೆಯಿತು.
ಮಂಜುನಾಥಸ್ವಾಮಿ ದೇವಾಲಯದ ಶ್ರೀ ಶ್ರೀ ಶ್ರೀ ರಾಜೇಶನಾಥ್ ಜೀ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪರಮಾತ್ಮ ತನ್ನ ಅವತಾರದ ಮುಖೇನ ಧರ್ಮವನ್ನು ಆಚರಿಸುವ ವಿಧಾನವನ್ನು ತಿಳಿಸಿದ್ದಾರೆ. ಭಕ್ತಿಯ ಮಾರ್ಗವನ್ನು ಅವಲಂಬಿಸುವುದರ ಮೂಲಕ ಧಾರ್ಮಿಕ ಮಹೋತ್ಸವಗಳನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಇದರ ಮೂಲಕ ಜೀವನದಲ್ಲಿ ಸಾರ್ಥಕತೆ ಕಂಡುಕೊಂಡು ಸಂಸ್ಕೃತಿ ಜೀವನದ ಮೌಲ್ಯವನ್ನು ಅರ್ಥೈಸಿಕೊಳ್ಳಲು ಇಂತಹ ಧಾರ್ಮಿಕ ಪೂಜಾ ಕೈಂಕರ್ಯಗಳು ಮಾರ್ಗದರ್ಶನವಾಗುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ, ಜನತಾದಳ ಮುಖಂಡ ನಾಪಂಡ ಮುತ್ತಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಈ ಪೂಜಾ ಕಾರ್ಯಕ್ರಮವು ಎಲ್ಲರನ್ನು ಒಗ್ಗೂಡಿಸುವ ಚಿಂತನೆಯಾಗಿದೆ.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂದ ನಂತರ ಕಾಸಿನಬಡ್ಡಿ ವ್ಯವಹಾರಕ್ಕೆ ಕಡಿವಾಣ ಬಿದ್ದಿದೆ. ಯೋಜನೆ ಮೂಲಕ ಸಾಲ ವಿತರಣೆ, ವಸೂಲಾತಿ ಮಾತ್ರ ಮುಖ್ಯ ಉದ್ದೇಶವಾಗಿರದೆ ಇತರೆ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು, ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಗ್ರಾಮಾಭಿವೃದ್ದಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಗ್ರಾಮಾಭಿವೃದ್ದಿ ಯೋಜನೆಗಳ ಮಾಹಿತಿಯನ್ನು ಸಭೆಗೆ ನೀಡಿದರು.
ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಎಚ್.ರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಪಿ.ಡಿ.ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಕ್ರಮಗಳು ಎಲ್ಲೆಡೆ ಸಾಮರಸ್ಯ ಉಂಟುಮಾಡುವಲ್ಲಿ ಸಹಕಾರಿ ಎಂದರು.
ಇದೇ ಸಂದರ್ಭ ಯೋಜನೆಯ ಫಲಾನುಭವಿಗಳಿಗೆ, ಸದಸ್ಯರಿಗೆ ಸಂಘದ ವತಿಯಿಂದ ಒದಗಿಸುವ ಮಾಶಾಸನ, ಎಲ್ ಐಸಿ, ಸಹಾಯಧನ, ಸ್ಕಾಲರ್ ಶಿಪ್ ಮತ್ತಿತರ ಸೌಲಭ್ಯಗಳನ್ನು ವಿತರಿಸಲಾಯಿತು.ಹೆಬ್ಬಾಲೆ ವಲಯದ 9 ಒಕ್ಕೂಟದ ನೂರಾರು ಸದಸ್ಯರು ಭಾಗವಹಿಸಿದರು. ಧಾರ್ಮಿಕ ಕಾರ್ಯಕ್ರಮ ಮೊದಲು ದೇವಾಲಯದ ಆವರಣದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಶ್ರಧ್ದಾಭಕ್ತಿಯಿಂದ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಎಂ.ಸಿ. ಮೋಹನ್, ಗೋಣಿಮರೂರು ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್. ಸಿ. ಸಿದ್ದಪ್ಪ, ಪ್ರಮುಖರಾದ ಧರ್ಮಪ್ಪ,ಅರ್ಜನ್, ಸೇರಿದಂತೆ 9 ಒಕ್ಕೂಟದ ಅಧ್ಯಕ್ಷರು ಹಾಜರಿದ್ದರು .
ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ 15 ಗ್ರಾಮಗಳ ನೂರಾರು ಕಾರ್ಯಕರ್ತರಿಗೆ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಸಂಘದ ಮೇಲ್ವಿಚಾರಕಿ ಜಯಶ್ರೀ ಕಾರ್ಯಕ್ರಮ, ಹೆಬ್ಬಾಲೆ ವಲಯ ಮೇಲ್ವಿಚಾರಕ ಲೋಹಿತ್ ಕಾರ್ಯಕ್ರಮ ನಿರ್ವಹಿಸಿದರು.