ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ-2023
ಕುಶಾಲನಗರ, ಫೆ 03: ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ-2023 ಶುಕ್ರವಾರ ಕುಶಾಲನಗರದ ರೈತ ಸಹಕಾರ ಭವನದ ಕೊಡಗಿನ ಕಥೆಗಾರ್ತಿ ಗೌರಮ್ಮ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡವನ್ನು ಉಳಿಸಿ ಬೆಳೆಸಿ ಕರ್ನಾಟಕ ರಾಜ್ಯವನ್ನು ಬಲಿಷ್ಠ ರಾಜ್ಯವಾಗಿಸುವಲ್ಲಿ ಎಲ್ಲರ ಸಹಕಾರ, ಪ್ರಯತ್ನ ಮುಖ್ಯ. ನೆರೆಯ ರಾಜ್ಯಗಳಲ್ಲಿ ಅಲ್ಲಿನ ಭಾಷೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಕರ್ನಾಟಕದಲ್ಲಿ ಇದು ತದ್ವಿರುದ್ದವಾಗಿದ್ದು ಆಂಗ್ಲ ವ್ಯಾಮೋಹ ಹೆಚ್ಚು ಕಂಡುಬರುತ್ತಿದೆ. ದಿನನಿತ್ಯ ಚಟುವಟಿಕೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವಂತಾಗಬೇಕು. ಕಸಾಪ ಸಮ್ಮೇಳನಗಳು ಸಾರ್ವಜನಿಕರು, ಜನಸಾಮಾನ್ಯರಲ್ಲಿ ಕನ್ನಡಾಭಿಮಾನ ಮೂಡಿಸಿ ಅಭಿಮಾನ ಬೆಳೆಸುವ ವೇದಿಕೆಯಾಗಿದೆ ಎಂದರು.
ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕುಶಾಲನಗರ ತಾಲೂಕು ಸಮ್ಮೇಳನ ಹೋಲಿಸಿದ ಬಸವರಾಜ ಹೊರಟ್ಟಿಯವರು, ಇಲ್ಲಿನ ಜನರ ಉತ್ಸಾಹ, ಶಿಸ್ತು, ಸಂಘಟನೆಯಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂದು ಶ್ಲಾಘಿಸಿದರು. ರಾಜ್ಯದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ 800 ಸರಕಾರಿ ಪ್ರಾ.ಶಾಲೆಗಳು ಮುಚ್ಚುವ ಹಂತದಲ್ಲಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಸರಕಾರಿ ಶಾಲೆಗಳ ಉಳಿಸುವ ಕಾರ್ಯವಾಗಬೇಕು. ಕೊಡಗಿನ ಕಾವೇರಿ ಎಲ್ಲರಿಗೂ ಸುಭೀಕ್ಷೆ ನೆಲೆಮಾಡಲಿ ಎಂದು ಆಶಿಸಿದರು. ಆಶಯ ನುಡಿಗಳಾಡಿದ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್, ಕುಶಾಲನಗರ ತಾಲೂಕು ರಚನೆಯಾದ ಬಳಿಕ ಪ್ರಥಮವಾಗಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ತಾಲೂಕು ಘೋಷಣೆ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸ್ಮರಿಸಿದ ರಂಜನ್, ತಾಲೂಕು ಬಳಿಕ ಕುಶಾಲನಗರ ಪಟ್ಟಣ ಪಂಚಾಯ್ತಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಮುಂದಿನ ದಿನಗಳಲ್ಲಿ ನಗರಸಭೆಯಾಗಲಿದೆ ಎಂದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಮಂಗಳೂರು ವಿವಿ ಪರೀಕ್ಷಾಂಗ ವಿಭಾಗದ ಕುಲಸಚಿವ ಪಿ.ಎಲ್.ಧರ್ಮ ಮಾತನಾಡಿ, ವಿವಿದ ಸಾಹಿತ್ಯ ಪ್ರಕಾರಗಳು ದೇಶದ ಏಕತೆಗೆ ಮಾರಕ. ಏಕತೆ ಸಾರುವ ಸಾಹಿತ್ಯದ ಅಗತ್ಯವಿದೆ. ಸಾಹಿತ್ಯ ಸಮುದಾಯಗಳ ಪ್ರಾತಿನಿಧಿಕ ರೂಪವಾಗಬಾರದು. ಪ್ರತಿಯೊಬ್ಬರೂ ಭಾರತಾಂಬೆಯ ಮಕ್ಕಳಂತೆ ಪ್ರತಿನಿಧಿಸುವ ಅಗತ್ಯವಿದೆ. ಯುವ ಸಮೂಕ ಕನ್ನಡ ಭಾಷೆಯ ಕೃಷಿಕರ ಪಾತ್ರ ನಿರ್ವಹಿಸಬೇಕಿದೆ. ಈ ಸಮ್ಮೇಳನದ ಮೂಲಕ ಅಗತ್ಯ ಬದಲಾವಣೆ ಬಗ್ಗೆ ಶಪಥ ಕೈಗೊಳ್ಳುವ ಅಗತ್ಯವಿದೆ. ದುಶ್ಚಟ ಮುಕ್ತ, ಲಂಚಮುಕ್ತ, ಅಪರಾದ ಮುಕ್ತ, ಮೋಸರಹಿತ, ಶೋಷಣೆರಹಿತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕಿದೆ ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಸ್ಮರಣ ಸಂಚಿಕೆ ಮುಖಪುಟ ಬಿಡುಗಡೆಗೊಳಿಸಿ ಮಾತನಾಡಿದರು.
ಕುಶಾಲನಗರ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿದರು.
ಕುಶಾಲನಗರ ತಾಲೂಕು ರಚನೆಗೆ ಹೋರಾಟ ನಡೆಸಿದ ಮುಂಚೂಣಿ ನಾಯಕ ವಿ.ಪಿ.ಶಶಿಧರ್, ತಾಲೂಕು ಅನುಷ್ಠಾನಕ್ಕೆ ಶ್ರಮವಹಿಸಿದ ಶಾಸಕ ಅಪ್ಪಚ್ಚುರಂಜನ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಸಾಪ ವತಿಯಿಂದ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪ್ರಾಸ್ತಾವಿಕ ನುಡಿಗಳಾಡಿದರು.ವೇದಿಕೆಯ ಕಾರ್ಯಕ್ರಮದಲ್ಲಿ ನಾಡಗೀತೆ, ರೈತ ಗೀತೆ, ಉದ್ಘಾಟನಡ ಗೀತೆ ಮೊಳಗಿತು. ಚಿತ್ರಕಲಾವಿದ ಸತೀಶ್ ಸ್ಥಳದಲ್ಲೇ ಚಿತ್ರ ರಚಿಸಿದರು.
ಬೆಳಗ್ಗೆ ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ರಾಷ್ಟ್ರ ಧ್ವಜಾರೋಹಣ, ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕಸಾಪ ಧ್ವಜಾರೋಹಣ, ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ಮೂರ್ತಿ ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ
ಪುರಸಭೆ ಉಪಾಧ್ಯಕ್ಷೆ ಸುರಯ್ಯಭಾನು, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಸಮ್ಮೇಳನದ ಆರ್ಥಿಕ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮೆರವಣಿಗೆ ಸಮಿತಿ ಅಧ್ಯಕ್ಷ ವೆಂಕಟೇಶ್ ಪೂಜಾರಿ, ವೇದಿಕೆ ಸಮಿತಿಯ ವಿ.ಎಸ್.ಆನಂದಕುಮಾರ್, ಆಹಾರ ಸಮಿತಿಯ ಎಂ.ಕೆ.ದಿನೇಶ್, ಅಲಂಕಾರ ಸಮಿತಿಯ ಚಂದ್ರು, ಪ್ರಚಾರ ಸಮಿತಿಯ ಚಂದ್ರಮೋಹನ್
ನಿಕಟಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಕಸಾಪ ವಿವಿಧ ಘಟಕಗಳ ಪ್ರಮುಖರಾದ ರೇವತಿ ರಮೇಶ್, ಎಂ.ಡಿ.ರಂಗಸ್ವಾಮಿ, ಅಂಬೇಕಲ್ ನವೀನ್, ದಯಾ ಚಂಗಪ್ಪ, ರಾಜೇಶ್ ಪದ್ಮನಾಭ, ಎಂ.ಎನ್.ಮೂರ್ತಿ, ಎಸ್.ನಾಗರಾಜ್, ಕೆ.ವಿ.ಉಮೇಶ್, ವಿವಿಧ ಸಮಿತಿಗಳ ಪ್ರಮುಖರು ಇದ್ದರು.