ಕುಶಾಲನಗರ, ಜ 20: ಪ್ರತಿನಿತ್ಯ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅಪಘಾತಗಳು ಹೆಚ್ಚುತ್ತಿವೆ ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚು ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ.ಆದ್ದರಿಂದ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ತಳ ಮಟ್ಟದಿಂದ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ತಾಲ್ಲೂಕು ತಹಶೀಲ್ದಾರ್ ಪ್ರಕಾಶ್ ಸಲಹೆ ನೀಡಿದರು.
ಕೊಡಗು ಜಿಲ್ಲಾ ಪೊಲೀಸ್, ಸೋಮವಾರಪೇಟೆ ಉಪ ವಿಭಾಗ ಹಾಗೂ ಇಲ್ಲಿನ ಸಂಚಾರ ಪೊಲೀಸ್ ಠಾಣೆ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ 2023 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷಕ ಗಂಗಾಧರಪ್ಪ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ,
ರಸ್ತೆ ಅಪಘಾತಗಳಲ್ಲಿ ಮೃತ ಪಡುವವರ ಪೈಕಿ ಶೇ. 50 ರಷ್ಟು ಮಂದಿ ದ್ವಿಚಕ್ರವಾಹನ ಸವಾರರಾಗಿದ್ದಾರೆ. ವಾಹನ ಚಾಲಕರು ಹಾಗೂ ದ್ವಿಚಕ್ರವಾಹನ ಸವಾರರು ಮತ್ತು ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಶಾಲಾ ಕಾಲೇಜು,ಕಚೇರಿಗೆ ಸರಿಯಾದ ಸಮಯಕ್ಕೆ ಹೋಗಲು ತಡವಾದರೂ ಸಹ ಸಂಚಾರ ನಿಯಮ ಪಾಲಿಸಬೇಕು ಆತುರಕ್ಕೆ ಬಿದ್ದು ಅಪಘಾತಕ್ಕೆ ಒಳಗಾದರೆ ಜೀವನ ಪರ್ಯಂತ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವೃತ್ತ ನಿರೀಕ್ಷಕ ಮಹೇಶ್ ಮಾತನಾಡಿ,ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿಗೂ ಕಾರಣವಾಗುತ್ತದೆ. ಯಾವುದೇ ರೀತಿಯ ವಾಹನ ಚಾಲನೆ ಮಾಡುವಾಗ ಸುರಕ್ಷಿತ ಚಾಲನೆ,ರಸ್ತೆ ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು, ಇತರರಿಗೂ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭ ಸ್ಥಳೀಯ ಸರ್ಕಾರಿ ಎಂಜಿನಿಯರ್ ಕಾಲೇಜು ಪ್ರಾಂಶುಪಾಲ ಸತೀಶ್, ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಚಂದ್ರಪ್ಪ,ಎಚ್.ಟಿ.ಗೀತಾ,ವಿವಿಧ ಕಾಲೇಜುಗಳ ಉಪನ್ಯಾಸಕರು,ಪೊಲೀಸ್ ಸಿಬ್ಬಂದಿಗಳು ಇದ್ದರು.
ಪಟ್ಟಣದ ಬೈಚನಹಳ್ಳಿ ಮಾರಮ್ಮ ದೇವಸ್ಥಾನ ಬಳಿಯಿಂದ ಆರಂಭಗೊಂಡ ಜಾಗೃತಿ ಜಾಥಾದಲ್ಲಿ ವಿವಿಧ ಶಾಲಾ,ಕಾಲೇಜು ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಬ್ಯಾನರ್ ಹಿಡಿದು ರಸ್ತೆ ಸುರಕ್ಷತಾ ನಿಯಮಗಳ ಕುರಿತು ಮೆರವಣಿಗೆಯಲ್ಲಿ ಘೋಷಣೆ ಕೂಗುತ್ತಾ ಸಾರ್ವಜನಿಕರ ಗಮನ ಸೆಳೆದರು.
Back to top button
error: Content is protected !!