ಕುಶಾಲನಗರ, ಜ10:
ಕೂಡಿಗೆ ಗ್ರಾಪಂ ಆಡಳಿತ ಅರಾಜಕತೆಯಿಂದ ಕೂಡಿದ್ದು ಅಧ್ಯಕ್ಷೆ ಸ್ವೇಚ್ಚಾಚಾರದಿಂದ ದುರಾಡಳಿತ ನಡೆಸುತ್ತಿದ್ದಾರೆ. ಅಧ್ಯಕ್ಷೆ ಪತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಅಧ್ಯಕ್ಷೆ ಮಂಗಳಾ ಮತ್ತು ಅವರ ಪತಿ ಪ್ರಕಾಶ್ ಪಂಚಾಯ್ತಿ ಒಳಗೆ ಹಾಗೂ ಹೊರಗೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಆರೋಪಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯತ್ ಸಭೆಗಳಲ್ಲಿ ನಡೆಯುವ ನಿರ್ಣಯಗಳು, ನಡಾವಳಿಗಳನ್ನು ದಾಖಲು ಮಾಡದೆ ಕಾರ್ಯ ರೂಪಕ್ಕೂ ತರದೆ ಅಧ್ಯಕ್ಷೆ ಮಂಗಳಾ ಉದ್ದಟತನ ಪ್ರದರ್ಶಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಪ್ರತಿಪಕ್ಷ ಸದಸ್ಯರ ವಿರುದ್ದ ಸುಳ್ಳು ಪೊಲೀಸ್ ದೂರು ದಾಖಲು ಮಾಡಿರುವುದು ಒಂದೆಡೆಯಾದರೆ ಮತ್ತೊಂದೆಡೆ ಈಕೆಯ ಪತಿ ಪ್ರಕಾಶ್ ಪ್ರತಿಪಕ್ಷದ ಸದಸ್ಯರಾದ ಅರುಣ್ ರಾವ್ ಎಂಬವರ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದಾರೆ. ಪ್ರಕಾಶ್ ವಿರುದ್ದ ಎಸ್.ಸಿ, ಎಸ್ಟಿ ಕಾಯ್ದೆಯಡಿ ದೂರು ದಾಖಲಾದರೂ ಇದುವರೆಗೆ ಪೊಲೀಸರು ಯಾವುದೇ ಕ್ರಮವಹಿಸದಿರುವುದು ಖಂಡನೀಯ ಎಂದರು.
ತನ್ನ ಪತ್ನಿಯ ಹೊಣೆಗೇಡಿತನ ಪ್ರಶ್ನಿಸಿದ ಸದಸ್ಯರ ಮೇಲೆ ಹಲ್ಲೆ ನಡೆಸಿರುವ ಪ್ರಕಾಶ್, ಪಂಚಾಯ್ತಿಗೆ ಬರುವ ಸಾರ್ವಜನಿಕರ ಮೇಲೂ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕೂಡಲೆ ಈ ಬಗ್ಗೆ ಜಿಪಂ ಸಿಇಒ ಸೂಕ್ತ ಕ್ರಮವಹಿಸಬೇಕು. ಗ್ರಾಪಂ ಅಧ್ಯಕ್ಷೆಯ ಧೋರಣೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಂಚಾಯತ್ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಸದಸ್ಯ ಅರುಣ್ ರಾವ್ ಮೇಲೆ ಹಲ್ಲೆ ನಡೆಸಿದ ಪ್ರಕಾಶ್ ಅವರ ಬಂಧನ ಕೂಡಲೆ ಆಗದಿದ್ದಲ್ಲಿ ಡಿವೈಎಸ್ಪಿ ಕಛೇರಿ ಮುಂಭಾಗ ಕೂಡ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶಶಿಧರ್ ಎಚ್ಚರಿಸಿದರು.
ಗ್ರಾಪಂ ಸದಸ್ಯ ಟಿ.ಪಿ.ಹಮೀದ್ ಮಾತನಾಡಿ, ಸದಸ್ಯರಿಗೆ ಪಂಚಾಯ್ತಿ ಒಳಗೆ ರಕ್ಷಣೆ ಇಲ್ಲದಂತಾಗಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿರುವ ಬಗ್ಗೆ ಪ್ರಶ್ನಿಸಿ ಸಭಾ ತ್ಯಾಗ ಮಾಡಿದ ಮಾತ್ರಕ್ಕೆ ತಮ್ಮನ್ನು ನಿಂದಿಸಿದರು ಎಂದು ಸದಸ್ಯರುಗಳ ಮೇಲೆ ಅಧ್ಯಕ್ಷೆ ಸುಳ್ಳು ಪೊಲೀಸ್ ದೂರು ದಾಖಲಿಸಿದ್ದಾರೆ. ಅಧ್ಯಕ್ಷೆಯ ಪತಿ ಪ್ರಕಾಶ್, ಅಧ್ಯಕ್ಷರ ಪರವಾಗಿ ತಾವೇ ಅಧಿಕಾರ ಚಲಾಯಿಸುತ್ತಿದ್ದು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಪಂಚಾಯ್ತಿ ಕಾರ್ಯಗಳಲ್ಲಿ ಮೂಗು ತೂರಿಸುವುದಲ್ಲದೆ ಕೆಲಸ ಕಾರ್ಯಗಳ ಬಗ್ಗೆ ಆಜ್ಞಾಪಿಸುತ್ತಾರೆ.
ಈ ಬಗ್ಗೆ ಜಿಪಂ ಸಿಇಒ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ತನಿಖೆ ನಡೆಸಿ ಅಧ್ಯಕ್ಷೆಯ ಅಧಿಕಾರ ರದ್ದುಗೊಳಿಸಬೇಕಿದೆ. ಸಭೆಗೆ ಪಾಲ್ಗೊಳ್ಳುವ ತಮಗೆ ಅಧ್ಯಕ್ಷೆ ಪತಿಯಿಂದ ಸೂಕ್ತ ರಕ್ಷಣೆ ಒದಗಿಸಬೇಕಿದೆ. ಸದಸ್ಯನ ಮೇಲೆ ಹಲ್ಲೆ ನಡೆಸಿ ಪ್ರಕಾಶ ಅವರನ್ನು ಕೂಡಲೆ ಬಂಧಿಸುವಂತೆ ಹಮೀದ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಅನಂತ್, ಚಂದ್ರು, ಮಾಜಿ ಸದಸ್ಯ ಎನ್.ಕೆ.ಚಂದ್ರಶೇಖರ್ ಇದ್ದರು.
Back to top button
error: Content is protected !!