ಪ್ರಕಟಣೆ

ಡಿ.25: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಕುಶಾಲನಗರ ತಾ.ಶಾಖೆ ಉದ್ಘಾಟನೆ

ಕುಶಾಲನಗರ, ಡಿ 23: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಕುಶಾಲನಗರ ತಾಲೂಕು ಶಾಖೆ ಉದ್ಘಾಟನಾ ಸಮಾರಂಭ ಡಿಸೆಂಬರ್ 25 ರಂದು ಭಾನುವಾರ ನಡೆಯಲಿದೆ ಎಂದು ಸಂಘದ ಸಮನ್ವಯ ಸಮಿತಿ ಪ್ರಮುಖರು ತಿಳಿಸಿದ್ದಾರೆ‌.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಸಮಿತಿಯ ಸದಸ್ಯ ರಾಜು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳಿಗೆ ಪೂರಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಸರ್ವಾಂಗೀಣ ಅಭಿವೃದ್ಧಿಗಾಗಿ ಸಹಕಾರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಎವಿಎಸ್ಎಸ್ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಸಂಘ‌ ನೋಂದಣಿ ಮಾಡಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೂಡ ಸಂಘದ ಶಾಖೆ ಆರಂಭಿಸುತ್ತಿದ್ದು ಕೊಡಗು‌ ಜಿಲ್ಲೆಯಲ್ಲಿ ಪ್ರಥಮವಾಗಿ ಕುಶಾಲನಗರದಲ್ಲಿ ಶಾಖೆ ಆರಂಭಿಸಲಾಗುತ್ತಿದೆ ಎಂದರು.
ಮತ್ತೋರ್ವ ಸದಸ್ಯ ಎಚ್.ಆರ್.ಪುಟ್ಟಸ್ವಾಮಿ ಮಾತನಾಡಿ, ಶಿಕ್ಷಣ, ಸಂಘಟನೆಗೆ ಒತ್ತು ನೀಡಿದಂತೆ ದಲಿತ ಸಮುದಾಯದ ಆರ್ಥಿಕ ಸಾಕ್ಷರತೆ ಬಲಪಡಿಸಲು ಸಹಕಾರ ಸಂಘ ಆರಂಭಿಸಲಾಗಿದ್ದು, ದಲಿತ ಸಮುದಾಯ ಬ್ಯಾಂಕಿಂಗ್ ಕ್ಷೇತ್ರದ ಬಗ್ಗೆ ಅರಿತು ಸಾಲ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶ ಸಂಘದ್ದಾಗಿದೆ. ಕುಶಾಲನಗರದ ಬೈಪಾಸ್ ರಸ್ತೆಯಲ್ಲಿ ಶಾಖೆ ಆರಂಭಿಸಲಿದ್ದು ಎಪಿಎಸಿಎಂಎಸ್ ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು.
ಸಂಘದ ಸದಸ್ಯ ಎಚ್.ಡಿ.ಚಂದ್ರು ಮಾತನಾಡಿ, ಕಾರ್ಯಕ್ರಮದ ದಿನ ಬೆಳಗ್ಗೆ ಕಾವೇರಿ‌ ನದಿ ಸೇತುವೆ ಪಕ್ಕದಲ್ಲಿರುವ ಕಾವೇರಿ ಪ್ರತಿಮೆ ಬಳಿಯಿಂದ ಸಭಾಂಗಣದವರೆಗೆ ಜ್ಞಾನ ಪ್ರಕಾಶ ಸ್ವಾಮೀಜಿಯವರ ಭವ್ಯ ಮೆರವಣಿಗೆ ನಡೆಯಲಿದೆ ಎಂದರು.
ಮತ್ತೋರ್ವ ಸದಸ್ಯ ಎಚ್.ಬಿ.ಗಣೇಶ್ ಮಾತನಾಡಿದರು.
ಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಕೆ.ಎಸ್.ರವಿ, ಎ.ಎಸ್.ಕೃಷ್ಣ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!