ಸಭೆ
ಫೆ 8, 9 ರಂದು ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ
ಕುಶಾಲನಗರ, ಡಿ. 05: ಫೆಬ್ರವರಿ 8 ಮತ್ತು 9 ರಂದು ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಹಿರಿಯ ಶ್ರೀಗಳ ಸ್ಮರಣೋತ್ಸವ, ಪಟ್ಟಾಭಿಷೇಕದ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ ಸಮಾರಂಭ ನಡೆಯಲಿದ್ದು ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದ ಮಹಾ ಸ್ವಾಮೀಜಿ ಕರೆಕೊಟ್ಟರು.
ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ವಾಲ್ಮೀಕಿ ಸಮುದಾಯದವರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,
ಶ್ರೇಣೀಕೃತ ವ್ಯವಸ್ಥೆಯ ಭಾರತ ದೇಶದಲ್ಲಿ ಜಾತಿ ವ್ಯವಸ್ಥೆ ನೀತಿಯನ್ನು ಮೆಟ್ಟಿ ನಿಂತು ವಿಜೃಂಭಿಸುತ್ತಿದ್ದಾಗ ನೊಂದವರಿಗೆ, ಕೆಳಜಾತಿಯವರಿಗೆ ಜ್ಯೋತಿಯಾಗಿ ಬಂದ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ಬರೆದು ನೊಂದವರಿಗೆ ಬೆಳಕಾದರು. ಆದರೆ ಕೆಲವು ರಾಜಕಾರಣಿಗಳು ಹಾಗು ಅಧಿಕಾರಿಗಳು ದೇವರು ಕೊಟ್ಟರು ಕೂಡ ಪೂಜಾರಿ ಕೊಡನು ಎಂಬಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಶ್ರೀಗಳು ವಿಷಾದಿಸಿದರು.
ಸಮುದಾಯದವರು ಸಂಘಟಿತರಾಗುವ ಮೂಲಕ ತಮಗೆ ದೊರಕಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕಿದೆ ಎಂದರು.
ಇದೇ ಸಂದರ್ಭ ವಾಲ್ಮೀಕಿ ನಾಯಕ ಸಮುದಾಯದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಅಶೋಕ್, ಯುವ ಘಟಕದ ಅಧ್ಯಕ್ಷ ಚಂದನಕುಮಾರ್, ಕೂಡುಮಂಗಳೂರು ಅಧ್ಯಕ್ಷ ವೆಂಕಟೇಶ್, ಪರಿಶಿಷ್ಟ ಜಾತಿ ಹಾಗು ಪಂಗಡಗಳ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಅರ್.ಮಂಜುಳಾ, ಪೊನ್ನಂಪೇಟೆ ಮಂಜುಳ, ಸೋಮವಾರಪೇಟೆಯ ಶಿವಾನಂದ, ವಿರಾಜಪೇಟೆಯ ಸುರೇಶ್, ಕೂಡ್ಲೂರು ವೈ.ಟಿ.ಪರಮೇಶ್, ಕರಿಯಪ್ಪ, ಕೆ.ಆರ್.ಚಂದ್ರು ಮೊದಲಾದವರಿದ್ದರು.