ಕುಶಾಲನಗರ, ನ 29: ಇತ್ತೀಚೆಗೆ ನಡೆದ ಹೆಬ್ಬಾಲೆ ಗ್ರಾಮದೇವತೆ ಬನಶಂಕರಿ ಅಮ್ಮನ ಉತ್ಸವದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ವಿಚಾರವಾಗಿ ಗ್ರಾಮದ ಇಬ್ಬರು ಯುವಕರ ಮೇಲೆ ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಒಡ್ಡಿದ ಯುವಕರ ಬಂಧನಕ್ಕೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.
ಸಮಿತಿ ಜಿಲ್ಲಾ ಸಂಚಾಲಕ ಕೆ.ಬಿ.ರಾಜು ನೇತೃತ್ವದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಬಿ.ರಾಜು, ಹೆಬ್ಬಾಲೆ ಗ್ರಾಮದೇವತೆ ಹಬ್ಬದ ಸಂದರ್ಭ ಗ್ರಾಮದ ಇಬ್ಬರು ದಲಿತ ಯುವಕರಾದ ಕೌಶಿಕ್ ಮತ್ತು ಶ್ರೀಧರ್ ಎಂಬವರ ಮೇಲೆ ಯುವಕರ ಗುಂಪೊಂದು ದೌರ್ಜನ್ಯ ನಡೆಸಿದೆ. ಈ ಇಬ್ಬರು ಯುವಕರು ಗಾಡಿ ಕಟ್ಟಬಾರದು ಎಂದು ಅದೇ ಗ್ರಾಮದ ಯುವಕರಾದ ಪುನಿತ್, ಚಂದ್ರು, ನಿಧಿ, ತ್ರಿನೇಶ್, ಕಾರ್ತಿಕ್, ನಂದನ್ ಎಂಬವರು ತಾಕೀತು ಮಾಡಿದಲ್ಲದೆ ಕೊನೆಯಲ್ಲಿ ಸ್ಪರ್ಧೆ ಗೆ ಇಳಿಯುವಂತೆ ಧಮಕಿ ಹಾಕಿದ್ದಾರೆ. ಇದರಿಂದ ಮನನೊಂದು ಈ ಇಬ್ಬರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿಲ್ಲ. ಮರುದಿನ ಕೂಡ ಇದೇ ಯುವಕರ ತಂಡ ಇವರಿಬ್ಬರು ನಿಂತಿದ್ದ ಸ್ಥಳಕ್ಕೆ ಆಗಮಿಸಿ ಜಾತಿ ನಿಂದನೆ ಮಾಡಿ ಶ್ರೀಧರ್ ಕೈಯಲ್ಲಿದ್ದ ಮೊಬೈಲ್ ಕಿತ್ತು ನೆಲಕ್ಕೆ ಬಿಸಾಡಿ ಚಾಕು ಹಾಕುವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದರು ಕೂಡ ಇದುವರೆಗೆ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ಕೂಡಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಕಛೇರಿ ಸಿಬ್ಬಂದಿ ಮೂಲಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕೌಶಿಕ್, ಶ್ರೀಧರ್, ಎಸ್.ಕೆ.ಸ್ವಾಮಿ, ಯಶವಂತ, ಸುದೀಪ್, ರವಿ, ಅನಿಲ್, ಸಾಗರ್, ಗೋಪಿನಾಥ್ ಮತ್ತಿತರರು ಇದ್ದರು.
Back to top button
error: Content is protected !!