ಕುಶಾಲನಗರ, ನ 29: ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ಕೊಡಗು ಅರಣ್ಯ ವೃತ್ತದ ಸಹಯೋಗದಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿ ಪ್ರಾಯೋಜಕತ್ವದಲ್ಲಿ ಔಷಧಿ ಸಸ್ಯಗಳ ಕುರಿತು ಕೊಡಗು ವೃತ್ತ ಮಟ್ಟದ ಅರಣ್ಯ ಅಧಿಕಾರಿಗಳ ಮತ್ತು ಮುಂಚೂಣಿ ಸಿಬ್ಬಂದಿಯ ಸಾಮರ್ಥ್ಯ ವರ್ಧನೆ ಮತ್ತು ಸಮನ್ವಯ ಕಾರ್ಯಗಾರ ಕುಶಾಲನಗರದಲ್ಲಿ ನಡೆಯಿತು.
ಗಂಧದಕೋಟಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ನಡೆದ ಕಾರ್ಯಗಾರವನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಹಲವು ಬಗೆಯ ಗಿಡಮೂಲಿಕೆಗಳಿದ್ದು, ಅವುಗಳ ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ.
ನಮ್ಮಲ್ಲಿ ಸಾಕಷ್ಟು ವನ್ಯ ಸಂಪತ್ತು ಇದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಹಲವು ಬಗೆಯ ಗಿಡಮೂಲಿಕೆಗಳು ಇವೆ. ಅವುಗಳ ಬಳಕೆ ಬಗ್ಗೆ ಜನರಿಗೆ ಅರಿವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಿ, ಅವುಗಳ ಬಳಕೆ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಬೇಕೆಂದರು.
ಕೊಡಗಿನಲ್ಲಿ ನಾಟಿ ವೈದ್ಯರು ಮತ್ತು ಗಿರಿಜನರು ಗಿಡಮೂಲಿಕೆಗಳ್ನು ಸಂಗ್ರಹಿಸುತ್ತಾರೆ. ಆದರೆ ಅದರ ಮಹತ್ವದ ಬಗ್ಗೆ ಅವರಿಗೆ ತಿಳಿದಿಲ್ಲ. ಹೊರ ರಾಜ್ಯದವರು ಅದನ್ನು ಖರೀದಿಸುತ್ತಾರೆ. ಸ್ಥಳೀಯರಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ ಸಾಕಷ್ಟು ಜೀವ ವೈವಿಧ್ಯ ಇದೆ. ನದಿ ಸಂರಕ್ಷಣೆ ಮತ್ತು ಜೀವ ವೈವಿಧ್ಯ ಉಳಿವಿಗೆ ಆಸಕ್ತ ಸಂಘಟನೆ, ಸಂಘಸಂಸ್ಥೆಗಳು, ಸ್ವಯಂ ಸೇವಕರ ಸಹಕಾರ ಪಡೆದು ಮಂಡಳಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಜಿ.ಎ. ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಳೆಯ ಆಯುರ್ವೇದ ಪದ್ಧತಿ ಇಂದು ಮುಂಚೂಣಿಗೆ ಬಂದಿದೆ. ಹೀಗಾಗಿ ಗಿಡಮೂಲಿಕೆಗಳ ಬೇಡಿಕೆ ಹೆಚ್ಚಾಗಿದೆ. ಔಷಧಿ ಗಿಡಗಳ ಬಗ್ಗೆ ಜನ ತಿಳಿದುಕೊಳ್ಳಬೇಕು. ಜೀವ ವೈವಿಧ್ಯ ಇಲ್ಲದಿದ್ದರೆ ಗಿಡಮೂಲಿಕೆಗಳ ಉತ್ಪಾದನೆ ಸಾಧ್ಯವಿಲ್ಲ. ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಮಾತನಾಡಿ, ಇಂದಿನ ದಿನದಲ್ಲಿ ಆಹಾರ ಪದ್ಧತಿಯಲ್ಲಿ ಬಹಳ ಬದಲಾವಣೆ ಆಗಿದೆ. ನಾವು ಸೇವಿಸುವ ಗಾಳಿ, ಆಹಾರ, ನೀರು ಯಾವುದೂ ಶುದ್ಧವಾಗಿಲ್ಲ. ಅವುಗಳು ಸುಧಾರಿಸಬೇಕಾದರೆ ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಅಪರೂಪದ ಜೀವ ವೈವಿಧ್ಯಗಳ ಸಂರಕ್ಷಣೆ ಆಗಬೇಕಿದೆ. ಕಾಡು ಪ್ರದೇಶ ಮಾತ್ರವಲ್ಲದೆ, ಜಮೀನಿನಲ್ಲಿ ಗಿಡಮೂಲಿಕೆಗಳನ್ನು ಬೆಳೆಯುವ ವಿಚಾರದಲ್ಲಿ ಉತ್ತೇಜನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಪಿ. ಚಂದ್ರಶೇಖರ್, ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಂ ಬಾಬು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷ ಕುಮಾರ್ ಚಿಕ್ಕನರಗುಂದ ವೇದಿಕೆಯಲ್ಲಿದ್ದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಪರಿಸರ ಗೀತೆ ಹಾಡಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ವಿಚಾರಗಳ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರ ನಡೆಸಿಕೊಟ್ಟರು.
Back to top button
error: Content is protected !!