ಕಾರ್ಯಕ್ರಮ
ನದಿ ಉತ್ಸವ: ವಿದ್ಯಾರ್ಥಿಗಳಿಂದ ನೀರಿನ ಸಂರಕ್ಷಣೆ ಕುರಿತ ಜಾಗೃತಿ :
ಕುಶಾಲನಗರ, ಅ.21 : ಕೊಡಗಿನಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಕುಶಾಲನಗರ ಪಟ್ಟಣದಲ್ಲಿ ನದಿಯ ಮಹತ್ವ, ನದಿ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ
ಶುಕ್ರವಾರ ಏರ್ಪಡಿಸಿದ್ದ
ಕಾವೇರಿ ನದಿ ಉತ್ಸವದಲ್ಲಿ
ಪ್ರೌಢಶಾಲಾ ವಿದ್ಯಾರ್ಥಿಗಳು ಜನರಲ್ಲಿ ನದಿ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ಘಟಕದ ವತಿಯಿಂದ ನಡೆದ ಜಾಗೃತಿ ಜಾಥಾದಲ್ಲಿ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ನೇತ್ರತ್ವದಲ್ಲಿ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕರು ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.) ಹಾಗೂ ಸ್ಟುಡೆಂಟ್ ಪೊಲೀಸ್ ಕೆಡೆಟ್( ಎಸ್.ಪಿ.ಸಿ.) ಘಟಕದ ವಿದ್ಯಾರ್ಥಿಗಳು ಪಾಲ್ಗೊಂಡು ಭಿತ್ತಿ ಫಲಕಗಳನ್ನು ಹಿಡಿದು ನದಿ ಮತ್ತು ನೀರಿನ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಿದರು.
ಜಾಥಾದಲ್ಲಿ ಸ್ಥಳೀಯ ಸರ್ಕಾರಿ ಪಿಯೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್.ಪಿ.ಸಿ. ಘಟಕ, ಫಾತಿಮ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಜ್ಞಾನ ಭಾರತಿ ಪ್ರೌಢಶಾಲೆ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಮತ್ತು ಎನ್.ಎಸ್.ಎಸ್.ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಾಥಾದಲ್ಲಿ ಫಾತಿಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಫ್ರಿ ಡಿ’ ಸೋಜ, ಶಿಕ್ಷಕರಾದ ಸಿ.ಟಿ.ಸೋಮಶೇಖರ್, ಎಂ.ಎಸ್.ಮಹೇಂದ್ರ, ನವೀನ್ ಇತರರು ಇದ್ದರು.
ಮೆರವಣಿಗೆಯಲ್ಲಿ ನದಿ ನೀರಿನ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳು ಕರಪತ್ರ ಹಂಚಿದರು.
—————————