ಅವ್ಯವಸ್ಥೆ
ಅನಧಿಕೃತ ಆಟೋ ನಿಲ್ದಾಣ: ಫಾತಿಮಾ ಕಾಂಪ್ಲೆಕ್ಸ್ ವರ್ತಕರಿಗೆ ತಲೆನೋವು: ಕೋರ್ಟ್ ಮೊರೆಗೆ ಚಿಂತನೆ
ಆಟೋ ನಿಲ್ದಾಣದಿಂದ ವ್ಯಾಪಾರ ವಹಿವಾಟು ಕುಂಠಿತ ಆರೋಒ
ಕುಶಾಲನಗರ, ಅ 02: ಕೊಡಗು ಜಿಲ್ಲೆಯಲ್ಲಿ ಅತಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಪ್ರಮುಖ ವಾಣಿಜ್ಯ ನಗರ ಕುಶಾಲನಗರ ಸಹಜವಾಗಿ ಕೆಲವೊಂದು ಸಮಸ್ಯೆಗಳಿಂದ ನಲುಗುತ್ತಿದೆ. ಜನಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ವಾಹನ ದಟ್ಟಣೆ ಕೂಡ ದ್ವಿಗುಣಗೊಳ್ಳುತ್ತಿದೆ. ಇದರ ನಡುವೆ ಆಟೋ ರಿಕ್ಷಾಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು ಕೆಲವು ವಾಣಿಜ್ಯ ಸಂಕೀರ್ಣಗಳ ಉದ್ಯಮಿಗಳಿಗೆ ವ್ಯಾಪಾರ ವಹಿವಾಟು ಕ್ಷೀಣಿಸುತ್ತಿರುವ ಆರೋಪಗಳು ವ್ಯಕ್ತಗೊಂಡಿವೆ.
ಬಿಎಂ ರಸ್ತೆಯ ಹೃದಯಭಾಗದಲ್ಲಿರುವ ಫಾತಿಮಾ ಕಾಂಪ್ಲೆಕ್ಸ್ ಮುಂಭಾಗ ಅನಧಿಕೃತವಾಗಿ ಮಾಡಿಕೊಂಡಿರುವ ಆಟೋ ನಿಲ್ದಾಣದಿಂದ ಕಾಂಪ್ಲೆಕ್ಸ್ ಮಳಿಗೆಯವರಿಗೆ ವ್ಯಾಪಾರ ವಹಿವಾಟು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಬಗ್ಗೆ ವರ್ತಕರು ಅಳಲು ತೋಡಿಕೊಂಡಿದ್ದಾರೆ.
ಈ ಆಟೋ ನಿಲ್ದಾಣಕ್ಕೆ ಕುಶಾಲನಗರ ಪಟ್ಟಣ ಪಂಚಾಯ್ತಿಯಾಗಲಿ, ಪೊಲೀಸ್ ಇಲಾಖೆಯಿಂದಾಗಲಿ, ಹೆದ್ದಾರಿ ಪ್ರಾಧಿಕಾರದಿಂದಾಗಲಿ ಯಾವುದೇ ಅಧಿಕೃತ ಅನುಮತಿ ಇಲ್ಲ. ಕಳೆದ 8 ವರ್ಷಗಳ ಹಿಂದೆ ಒಂದೆರೆಡು ಆಟೋಗಳು ಬಂದು ಇಲ್ಲಿ ನಿಲ್ಲುತ್ತಿದ್ದವು. ಕಾಲಕ್ರಮೇಣ ಆಟೋಗಳ ಸಂಖ್ಯೆ ಏರಿಕೆಯಾಯಿತು. ಇದೀಗ ಬರೋಬ್ಬರಿ ಫಾತಿಮಾ ಕಾಂಪ್ಲೆಕ್ಸ್ ಮುಂಭಾಗ 40 ಕ್ಕೂ ಅಧಿಕ ಆಟೋಗಳು ಸರ್ಕ್ಯುಲೇಟ್ ಆಗುತ್ತುದೆ. ಒಂದೇ ಬಾರಿಗೆ 25 ಕ್ಕೂ ಅಧಿಕ ಆಟೋಗಳು ನಿಲುಗಡೆಗೊಳ್ಳುತ್ತಿವೆ. ಇದರಿಂದಾಗಿ ಇಲ್ಲಿ ಗ್ರಾಹಕರು ತಮ್ಮ ವಾಹನ ನಿಲುಗಡೆಗೆ ಅವಕಾಶ ದೊರೆಯುತ್ತಿಲ್ಲ. ಪಾದಾಚಾರಿ ರಸ್ತೆ ಕೂಡ ಕಾಣದಂತಾಗಿದೆ. ಚರಂಡಿ ಮೇಲಿನ ಸ್ಲ್ಯಾಬ್ ಗಳ ಮೇಲೆ ಆಟೋಗಳ ಸಾಲು ನಿಲುತ್ತಿದ್ದು ಚರಂಡಿ ಸ್ವಚ್ಚಗೊಳಿಸಲು ಕೂಡ ಅವಕಾಶ ಇಲ್ಲದಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯ್ತಿಗೆ ಹಲವು ಬಾರಿ ಪತ್ರ ವ್ಯವಹಾರ ನಡೆಸಿದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಇದೇ ಕಾಂಪ್ಲೆಕ್ಸ್ ನಲ್ಲಿ ಶಾಲೆಯೊಂದು ಕಾರ್ಯನಿರ್ವಹಿಸುತ್ತಿದ್ದು ಮಕ್ಕಳಿಗೆ ಕೂಡ ಅಡ್ಡಾಡಲು ಅನಾನುಕೂಲ ಎದುರಾಗಿದೆ ಎಂದು ಮಳಿಗೆದಾರರಾದ ಪಿ.ಎಂ.ಮೋಹನ್, ರಾಜು ಶರ್ಮ, ಭನ್ವರ್ ಲಾಲ್, ಕಬೀರ್, ಸಿ.ಬಿ.ಹರೀಶ್, ದಿನೇಶ್, ಡಾ.ಹರಿ ಶೆಟ್ಟಿ, ಸುರೇಶ್ ರಾವಲ್, ಎಚ್.ಗಣೇಶ್, ರಮೇಶ್, ಸಗರಾಮ್, ಹೈದರ್ ಖಾನ್, ಪ್ರಕಾಶ್, ಭೀಮಣ್ಣ, ತನ್ವೀರ್ ಅಹಮ್ಮದ್, ಅರುಣ, ಖಾಸಿಂ ಮತ್ತಿತರರು ಆರೋಪಿಸಿದ್ದಾರೆ.
ತಿಂಗಳಲ್ಲಿ 15 ದಿನ ಕಾಂಪ್ಲೆಕ್ಸ್ ಮತ್ತೊಂದು ಭಾಗದಲ್ಲಿ ನಿಲುಗಡೆಗೊಳಿಸಲು ಕೋರಲಾಗಿದೆ. ಆದರೂ ಕೂಡ ಚಾಲಕರು ಸ್ಪಂದನೆ ನೀಡಿಲ್ಲ. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ಸ್ಥಳ ಪರಿಶೀಲಿಸಿ ಬದಲೀ ವ್ಯವಸ್ಥೆಗೆ ಸೂಚಿಸಿದ್ದರೂ ಚಾಲಕರು ಪಾಲನೆ ಮಾಡಿಲ್ಲ. ಸಮಸ್ಯೆ ತೋಡಿಕೊಳ್ಳುವ ನಮ್ಮನ್ನೇ ಅವರು ವೈರಿಗಳನ್ನು ಕಾಣುತ್ತಿದ್ದಾರೆ ಎಂದು ವರ್ತಕರು ಅಳಲು ತೋಡಿಕೊಂಡಿದ್ದಾರೆ. ಇತ್ತೀಚಿನ ದಿನಗಳು ಈ ವರ್ತಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಸಾಲ ಮಾಡಿ ಬಂಡವಾಳ ಹಾಕಿ ಇತ್ತ ಗ್ರಾಹಕರನ್ನು ಆಕರ್ಷಿಸಲು ಸಾಧ್ಯವಾಗದೆ ಸಾಲದಿಂದ ಉದ್ಯಮ ತೊರೆಯುವ ಪರಿಸ್ಥಿತಿ ಉಂಟಾಗಿರುವ ಬಗ್ಗೆ ಪರಿತಪಿಸುತ್ತಿದ್ದಾರೆ.
ಅನಧಿಕೃತ ಆಟೋ ನಿಲ್ದಾಣದಿಂದ ವರ್ತಕರು ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ನಮ್ಮ ಮನವಿಗೆ ಇದುವರೆಗೆ ಯಾರಿಂದಲೂ ಸೂಕ್ತ ಪರಿಹಾರ ದೊರೆತಿಲ್ಲ. ಅಂತಿಮವಾಗಿ ಈ ಸಂಬಂಧ ನ್ಯಾಯಾಲಯ ಮೊರೆ ಹೋಗಲು ಮುಂದಾಗಿದ್ದೇವೆ.
-ಪಿ.ಎಂ.ಮೋಹನ್, ಅಧ್ಯಕ್ಷರು, ಫಾತಿಮಾ ಕಾಂಪ್ಲೆಕ್ಸ್ ಅಸೋಸಿಯೇಷನ್.
ಕೊರೋನ ನಂತರ ವ್ಯಾಪಾರ ನೆಲಕಚ್ಚಿದೆ. ಈ ಮಧ್ಯೆ ಹೆದ್ದಾರಿ ಬದಿಯಲ್ಲಿದ್ದರೂ ಕೂಡ ಆಟೋಗಳ ಹಾವಳಿಯಿಂದ ಗ್ರಾಹಕರ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದೆ ನಮ್ಮ ಅಂಗಡಿಗಳು ಮೂಲೆಗುಂಪಾಗಿವೆ. ಹಲವರು ಅಂಗಡಿ ಮುಚ್ಚುವ ಚಿಂತನೆಯಲ್ಲಿದ್ದಾರೆ.
-ರಾಜು ಶರ್ಮ, ವರ್ತಕ.