ಸಭೆ

ನಂಜರಾಯಪಟ್ಟಣ ಗ್ರಾಮಸಭೆ: ತೂಗುಸೇತುವೆ ಕೊರತೆ: ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಆರೋಪ

ಕಾಡಾನೆ, ವನ್ಯಜೀವಿಗಳ‌ ಹಾವಳಿ, ಸ್ಮಶಾನ‌ ಕೊರತೆ ಬಗ್ಗೆ ಪ್ರಮುಖ ಚರ್ಚೆ

ಕುಶಾಲನಗರ, ಸೆ 20: ನಂಜರಾಯಪಟ್ಟಣ ಗ್ರಾಪಂ‌ ವತಿಯಿಂದ ಹೊಸಪಟ್ಟಣದ ಸಮುದಾಯ ‌ಭವನದಲ್ಲಇ 2022-23ನೇ ಸಾಲಿನ ಮೊದಲನೇ ಅವಧಿಯ ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು.

ಗ್ರಾಪಂ‌ ಅಧ್ಯಕ್ಷರಾದ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆ ಆರಂಭದಲ್ಲಿ ಹಿಂದಿನ‌ ಗ್ರಾಮಸಭೆಯ ನಡಾವಳಿಯನ್ನು ಓದಿ ಅಂಗೀಕಾರಕ್ಕೆ ಸಭೆಯ ಮುಂದೂಡಲಾಯಿತು.

ಗ್ರಾಮದಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ವತಿಯಿಂದ ಅಳವಡಿಸಿರುವ ರೈಲ್ವೇ ಬ್ಯಾರಿಕೆಡ್, ಹಾಂಗಿಂಗ್ ಸೋಲಾರ್ ಫೆನ್ಸ್ ಯೋಜನೆ‌ ಕಳಪೆ ಗುಣಮಟ್ಟದ ಕಾರಣ ವಿಫಲವಾಗಿದ್ದು ಕಾಡಾನೆ ಹಾವಳಿ ನಿರಂತರವಾಗಿ ಮುಂದುವರೆದಿರುವ ಬಗ್ಗೆ ಚರ್ಚೆ ನಡೆಯಿತು.
ಈ ಯೋಜನೆ ವಿಫಲವಾಗಿರುವ ಬಗ್ಗೆ ಅರಣ್ಯ ಇಲಾಖೆ ಮೇಲಧಿಕಾರಿಗಳ ಗಮನಕ್ಕೆ‌ ತರಲಾಗಿದೆ. ಕಳಪೆ‌ ಕಾಮಗಾರಿ ನಡೆಸಿದ ಗುತ್ತಿಗೆದಾರ ವಿರುದ್ದ ತನಿಖೆಗೆ ಆಗ್ರಹಿಸಲಾಗಿದೆ. ವನ್ಯ ಜೀವಿಗಳ ಹಾವಳಿ ತಡೆಗಟ್ಟಲು ಡಿಎಫ್ ಒ ಅವರ ನೇತೃತ್ವದಲ್ಲಿ ವಿಶೇಷ ಗ್ರಾಮಸಭೆ ಹಮ್ಮಿಕೊಳ್ಳುವ ಬಗ್ಗೆ ಹಾಗೂ  ಕಾಡಾನೆ ಹಾವಳಿ ನಿಯಂತ್ರಣಕ್ಕೆ‌ ಬರದಿದ್ದಲ್ಲಿ ಪಂಚಾಯ್ತಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ಸಿ.ಎಲ್.ವಿಶ್ವ ತಿಳಿಸಿದರು. ಇದಕ್ಕೆ ಸದಸ್ಯ ಆರ್.ಕೆ.ಚಂದ್ರ ದನಿಗೂಡಿಸಿ, ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನ ವಿರುದ್ದ ಸೂಕ್ತ ತನಿಖೆ ಆಗ್ರಹಿಸಿದರು.
ಗ್ರಾಮದಲ್ಲಿ ಸ್ಮಶಾನ ಸಮಸ್ಯೆ ಬಗ್ಗೆ ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಅಲ್ಪಸಂಖ್ಯಾತರ ಸ್ಮಶಾನ ಪಕ್ಕ‌ ಅರಣ್ಯ ಪೈಸಾರಿ ಜಾಗದಲ್ಲಿ ಶವಸಂಸ್ಕಾರಕ್ಕೆ ಅರಣ್ಯ ಇಲಾಖೆಯಿಂದ ಅನಾನುಕೂಲ ಉಂಟಾಗುತ್ತಿದೆ ಎಂದು ಗ್ರಾಮಸ್ಥರಾದ ಅಪ್ಪು ಮತ್ತಿತರರು ಆರೋಪಿಸಿದರು. ಹೊಸದಾಗಿ ನಂಜರಾಯಪಟ್ಟಣ ಮತ್ತು ವಿರುಪಾಕ್ಷಪುರದಲ್ಲಿ ಗುರುತಿಸಿರುವ ಸ್ಮಶಾನದಿಂದ ಸಾರ್ವಜನಿಕರಿಗೆ ಸಮಸ್ಯೆ, ರಸ್ತೆ ಸಂಪರ್ಕ‌ ಕೊರತೆ ಎದುರಾಗಿದೆ. ಸಮಸ್ಯೆ ಒಳಗೊಂಡ ಸ್ಮಶಾನಕ್ಕೆ ಬದಲಾಗಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದೇ ವಿಶಾಲ ಸ್ಮಶಾನಕ್ಕೆ ಸೂಕ್ತ ಸ್ಥಳ ಗುರುತಿಸಲು ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆದ ಸಾರ್ವಜನಿಕರಿಗೆ ಅನುಕೂಕವಾಗುವ ಪ್ರದೇಶದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಲು ಪತ್ರ ವ್ಯವಹಾರ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಕುಶಾಲನಗರ ತಾಲೂಕಾಗಿ ಮೇಲ್ದರ್ಜೇರಿದ್ದು ನಂಜರಾಯಪಟ್ಟಣ ಗ್ರಾಮವನ್ನು ಹೋಬಳಿ ಕೇಂದ್ರವಾಗಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಹೋಬಳಿ ಕೇಂದ್ರವಾಗುವ ಸಾಧ್ಯತೆ ಕಡಿಮೆಯಿದೆ. ಅಂತಹ ಅವಕಾಶಗಳಿದ್ದಲ್ಲಿ ಹೋಬಳಿ ಕೇಂದ್ರ ರಚನೆಗೆ ಒತ್ತಾಯಿಸಿ ಗ್ರಾಮಸ್ಥರೊಂದಿಗೆ ಹೋರಾಟ ರೂಪಿಸಲು ಸಿದ್ದ ಎಂದರು.
ದುಬಾರೆಯಲ್ಲಿ‌ ಕಾವೇರಿ ನದಿ ದಾಟಲು ಹೆಚ್ಚುವರಿ‌ ಮೋಟಾರ್ ಬೋಟ್ ಅಗತ್ಯತೆ, ತೂಗು ಸೇತುವೆ‌ ನಿರ್ಮಾಣದ ಬೇಡಿಕೆ ಇದುವರೆಗೆ ಈಡೇರದ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿತು. ಪ್ರವಾಸಿಗರು, ಗ್ರಾಮಸ್ಥರ ಅನುಕೂಲಕ್ಕಾಗಿ ತೂಗುವಸೇತುವೆ ನಿರ್ಮಾಣಕ್ಕೆ ಪ್ರವಾಸೋದ್ಯಮ‌ ಇಲಾಖೆಯಿಂದ ಅರಣ್ಯ ಇಲಾಖೆಗೆ ಅನುದಾನ‌ ಬಿಡುಗಡೆಗೊಂಡಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆ ಸಾಕಾರಗೊಳ್ಳಲಿಲ್ಲ‌ ಎಂದು ಉದ್ಯಮಿ ರತೀಶ್ ಸಭೆಯಲ್ಲಿ ಆಕ್ರೋಷ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳು ಇಲಾಖಾವಾರು ಯೋಜನೆಗ ಬಗ್ಗೆ ಸಭೆಗೆ ಮಾಹಿತಿ‌ ನೀಡಿದರು.
ಕೃಷಿ ಇಲಾಖೆ ಸಹಾಯಕ ಅಧಿಕಾರಿ ಕಾವ್ಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಮೀರ, ಪಿಡಿಒ‌ ಬಿ.ಎಂ. ಕಲ್ಪ, ಕಾರ್ಯದರ್ಶಿ ಶೇಷಗಿರಿ ಸೇರಿದಂತೆ ಸದಸ್ಯರು, ಗ್ರಾಮಸ್ಥರು ಸಭೆಯಲ್ಲಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!