ಪ್ರಕಟಣೆ

ಪ್ಲಾಸ್ಟಿಕ್ ಮುಕ್ತ ‘ದಸರಾ’ ಆಚರಣೆಗೆ ಗ್ರೀನ್ ಸಿಟಿ ಫೋರಂ ಆಗ್ರಹ

ಸಾರ್ವಜನಿಕರು ಹಾಗೂ ದಸರಾ ಸಮಿತಿಗೆ ಚೈಯಂಡ ಸತ್ಯ‌ ಮನವಿ

ಕುಶಾಲನಗರ, ಸೆ 19: ಈ ಬಾರಿಯ ಗೋಣಿಕೊಪ್ಪ ಹಾಗೂ ಮಡಿಕೇರಿ ದಸರಾ ಜನೋತ್ಸವವನ್ನು ಪ್ಲಾಸ್ಟಿಕ್ ಮುಕ್ತ ಉತ್ಸವವಾಗಿ ಆಚರಿಸುವಂತೆ ಗ್ರೀನ್ ಸಿಟಿ ಫೋರಂ ಸಾರ್ವಜನಿಕರು ಹಾಗೂ ದಸರಾ ಸಮಿತಿಯನ್ನು ಮನವಿ ಮಾಡಿದೆ.
ಕೊಡಗು ಜಿಲ್ಲೆ ಪ್ರಕೃತಿ ರಮಣೀಯ ತಾಣ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸುಂದರ ಕೊಡಗಿನ ಪ್ರಾಕೃತಿಕ ಸೊಬಗನ್ನು ಸಂರಕ್ಷಿಸಬೇಕಾದ್ದು ಎಲ್ಲರ ಜವಾಬ್ದಾರಿ. ಆದರೆ ದಸರಾ ಶೋಭಾಯಾತ್ರೆ ನಂತರ ಮಡಿಕೇರಿ, ಗೋಣಿಕೊಪ್ಪದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವೇ ಕಂಡುಬರುತ್ತದೆ. ಇದರಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತದೆ. ಹೀಗಾಗಿ ಜಿಲ್ಲಾಡಳಿತ ಹಾಗೂ ದಸರಾ ಜನೋತ್ಸವ ಸಮಿತಿ ಈ ಬಗ್ಗೆ ಕಾಳಜಿ ವಹಿಸಿ, ಈ ಬಾರಿ ಪ್ಲಾಸ್ಟಿಕ್ ಮುಕ್ತ ಉತ್ಸವವನ್ನು ಮುಖ್ಯ ಧ್ಯೇಯವಾಗಿಸಿಕೊಂಡು ದಸರಾ ಆಚರಿಸುವಂತೆ ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಮನವಿ ಮಾಡಿದ್ದಾರೆ.
ನವರಾತ್ರಿ ಆರಂಭದಿಂದಲೂ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ವರ್ತಕರಿಗೆ ದಂಡ ವಿಧಿಸುವ ಕಾರ್ಯವನ್ನು ನಗರಸಭೆ ಮಾಡುತ್ತಿದೆ. ನವರಾತ್ರಿ ಹಾಗೂ ದಸರಾ ಸಂದರ್ಭ ಬೀದಿ ಬದಿ ಮಳಿಗೆ ತೆರೆಯುವ ವ್ಯಾಪಾರಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿ, ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು. ಈ ಸಂಬಂಧ ಜಿಲ್ಲಾಡಳಿತದ ಅಧಿಕಾರಿಗಳು, ದಸರಾ ಸಮಿತಿ, ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿಯಾಗಿ ಫೋರಂ ವತಿಯಿಂದ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಜತೆಗೆ ಈ ಕಾರ್ಯಕ್ಕೆ ವರ್ತಕರು ಮತ್ತು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸಹಕಾರ ನೀಡುವಂತೆ ವಿನಂತಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!