ಕಾರ್ಯಕ್ರಮ

ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ‘ಸಾಂಸ್ಕೃತಿಕ ಹಾಗೂ ಕ್ರೀಡಾ ವೈಭವ- ಜ್ಞಾನ ಕಲರವ

ಕುಶಾಲನಗರ, ಸೆ 12: ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ‘ಸಾಂಸ್ಕೃತಿಕ ಹಾಗೂ ಕ್ರೀಡಾ ವೈಭವ- ಜ್ಞಾನ ಕಲರವ ೨೦೨೨’ ಕಾರ್ಯಕ್ರಮದಲ್ಲಿ ನಡೆಯಿತು.
ಮುಖ್ಯ‌ ಭಾಷಣಕಾರರಾಗಿ ಅಗಮಿಸಿದ್ದ ಸಾಹಿತಿಗಳಾದ ಚೆಟ್ನಳ್ಳಿ ಮಹೇಶ್ ಮಾತನಾಡಿ, ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವ ಮನೋಧರ್ಮ ಬೆಳೆಸಿಕೊಳ್ಳಬೇಕು. ವಿದ್ಯೆ ಕೈ ವಶವಾದರೆ ಸಮಾಜದಲ್ಲಿ ಮಾತ್ರವಲ್ಲದೆ ದೇವರಿಗೂ ಅರ್ಪಿತನಾಗುತ್ತಾನೆ. ನಾಗರೀಕತೆಯ ಪ್ರತೀಕವಾದ ಗುಣಲಕ್ಷಣಗಳನ್ನು ಹೊಂದಿರುವ ಮನುಷ್ಯ ಸಂಸ್ಕೃತಿಗಳ ಮೌಲ್ಯವನ್ನು ಮರೆಯುತ್ತಿದ್ದಾನೆ. ತಿಳುವಳಿಕೆ ಮತ್ತು ನಡವಳಿಕೆ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಸಂವಹನದ ಮುಖಾಂತರ ಪರಿಚಯ ಮಾಡಿಕೊಡುವ ಜವಾಬ್ದಾರಿ ಮತ್ತು ಎಚ್ಚರಿಕೆ ಇರಬೇಕು. ಸ್ಪೂರ್ತಿಯ ಚಿಲುಮೆ ಬತ್ತಿ ಹೋಗಬಾರದು. ಬದುಕಿನ ಅರಿವಿನ ವಿಸ್ತಾರವಾಗುವುದು ಹಿರಿಯರ ಒಡನಾಟದಿಂದ ಮಾತ್ರ. ಹಿರಿಯರು ಒಂದು ವಿಶ್ವಕೋಶದಂತೆ. ಸಂಸ್ಕೃತಿಯ ಪುನರ್ ನಿರ್ಮಾಣ ಆಗಬೇಕು. ಚರಿತ್ರೆಯ ಸಂಸ್ಕೃತಿಯ ನೆನಪು ಇರಬೇಕು. ಪ್ರತಿಭೆಯನ್ನು ಒಳಗೊಂಡಿರುವ ವಿದ್ಯಾರ್ಥಿಗಳನ್ನು ಸೂಕ್ತ ದಾರಿಗೆ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಶಿಕ್ಷಕನದು. ಆಲೋಚನಾ ವಿಧಾನವನ್ನು ವೃದ್ಧಿ ಮಾಡುವುದೇ ಶಿಕ್ಷಣ. ಖಚಿತತೆಯ ದಾರಿಯಲ್ಲಿ ಸಾಗುವ ಗುಣವನ್ನು ರೂಢಿಸಿಕೊಂಡು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದು ತಿಳಿಸಿದರು‌.
ಸಂಸ್ಥೆಯ ಪ್ರಭಾರ ನಿರ್ದೇಶಕರಾದ ಪ್ರೊ. ಕೆ. ಎಸ್. ಚಂದ್ರಶೇಖರಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯು ಕೊಡಗು ವಿಶ್ವವಿದ್ಯಾನಿಲಯ ಆಗುವುದಕ್ಕೆ ಬೇಕಾಗುವ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಹೊಂದಿದೆ. ನಮ್ಮ ಸಂಸ್ಥೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಉನ್ನತ ವ್ಯಾಸಂಗವನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಡಾ. ಕೆ. ಕೆ.ಧರ್ಮಪ್ಪ ಅವರು ವಾರ್ಷಿಕ ವರದಿ ಮಂಡಿಸಿದರು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಿತಿಯ ಸಂಯೋಜಕರಾದ ರಾಜಕುಮಾರ್ ಮೇಟಿ, ದೈಹಿಕ ಶಿಕ್ಷಕರಾದ ಎಚ್ ಆರ್ ವಿಜಯ್, ವಿವಿಧ ವಿಭಾಗದ ಉಪನ್ಯಾಸಕರು, ಬೋಧಕೇತರ ವೃಂದ, ತಾಂತ್ರಿಕ ವೃಂದ, ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!