ಕುಶಾಲನಗರ, ಸೆ 07: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡ ಬಿ.ಎಸ್.
ಅನಂತಕುಮಾರ್ ಅವರನ್ನು ಡಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ಕಾರ್ಯಕರ್ತರು ಆಗ್ರಹಿಸಿದ ಘಟನೆ ಶನಿವಾರಸಂತೆಯಲ್ಲಿ ಬುಧವಾರ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಬದಲಾವಣೆ ಬಳಿಕ
ಸೋಮವಾರಪೇಟೆ ತಾಲ್ಲೂಕಿನ ಹಂಡ್ಲಿ ಗ್ರಾಮದಲ್ಲಿ ಬಿ.ಎಸ್.ಅನಂತಕುಮಾರ್ ಅವರು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ
ಕಳೆದ ಎರಡೂವರೆ ವರ್ಷಗಳಿಂದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ದುಡಿದು ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಿದ ಅನಂತಕುಮಾರ್ ಅವರನ್ನು ಏಕಾಏಕಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿರುವುದಕ್ಕೆ ಕಾಂಗ್ರೆಸ್ ವಿವಿಧ ಘಟಕಗಳ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ತೀವ್ರ ಆಕ್ರೋಷ ಹೊರಹಾಕಿದರು.
ಇದೀಗ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿ.ಪಿ.ಶಶಿಧರ್, ಕಳೆದ 2 ವರ್ಷ 9 ತಿಂಗಳು ಬ್ಲಾಕ್ ಕಾಂಗ್ರೆಸ್ ನ ಯಾವುದೇ ಸಭೆ ಸಮಾರಂಭಗಳಿಗೆ ಹಾಜರಾಗದೆ, ಪಕ್ಷದ ಇತರೆ ಕಾರ್ಯಕರ್ತರನ್ನು ಸಭೆಗೆ ಹೋಗದಂತೆ ಅಡ್ಡಿಪಡಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿವರನ್ನು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಸಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಎಸ್.ಅನಂತ ಕುಮಾರ್ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಕಳೆದ ಮೂರು ವರ್ಷಗಳಿಂದ ಪಕ್ಷದ ಏಳಿಗೆಗೆ ದುಡಿದ ತನ್ನನ್ನು ಯಾವುದೇ ಮಾಹಿತಿ ನೀಡದೆ, ಏಕಾಏಕಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿರುವುದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ.
ನಾವು ಕಟ್ಟಿ ಬೆಳೆಸಿದ ಪಕ್ಷವನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆ ಇಲ್ಲ. ಆದರೆ
ಪಕ್ಷದಲ್ಲಿರುವ ಕೊಳಕು ನಾಯಕರ ಮನಸ್ಸನ್ನು ಸ್ವಚ್ಛತೆ ಮಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಹೇಳಿದರು. ಬ್ಲಾಕ್ ಅಧ್ಯಕ್ಷನಾಗಿದ್ದ ಸಂದರ್ಭ ದಬ್ಬಾಳಿಕೆ, ಸುಳ್ಳು ಆರೋಪಗಳನ್ನು ಮಾಡುತ್ತ ತೊಂದರೆ ನೀಡಿದ ವ್ಯಕ್ತಿಗಳಿಗೆ ರಾಜ್ಯ ನಾಯಕರು ಮನ್ನಣೆ ನೀಡಿರುವುದು ದುರದೃಷ್ಟಕರ ಎಂದು ಹೇಳಿದರು. ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿ 130 ಸದಸ್ಯರ ಗೆಲುವಿಗೆ ಕಾರಣನಾಗಿದ್ದೇನೆ.ಡಿಜಿಟಲ್ ಸದಸ್ಯತ್ವ ನೊಂದಾಣಿಯಲ್ಲೂ 2732 ನೂತನ ಸದಸ್ಯರನ್ನು ನೊಂದಾಯಿಸುವ ಮೂಲಕ ಜಿಲ್ಲೆಯಲ್ಲಿ ಮಾದರಿಯಾಗಿದೆ. ಪ್ರಾಮಾಣಿಕವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ನಮ್ಮನ್ನು ಬದಲಿಸಿರುವುದು ಪಕ್ಷದ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಪಕ್ಷದ ಸಿದ್ದಾಂತ ಬದ್ಧರಾಗಿದ್ದೆವೆ.ಪಕ್ಷ ಬಿಡುವ ಪ್ರಶ್ನೆ ಇಲ್ಲ.ಟಿಕೇಟ್ ಯಾರಿಗೆ ಕೊಟ್ಟರು ಅವರ ಗೆಲುವಿಗೆ ಶ್ರಮಿಸುತ್ತೇವೆ.ಡಿಸಿಸಿ ಕಾರ್ಯಾಧ್ಯಕ್ಷರು ಪ್ರತಿಯೊಬ್ಬರನ್ನೂ ವಿಶ್ವಾಕ್ಕೆ ತೆಗೆದುಕೊಳ್ಳಬೇಕು. ಸರ್ವಾಧಿಕಾರಿ ವರ್ತನೆ ಕೈಬಿಡಬೇಕಿದೆ ಎಂದರು.
ಕುಶಾಲನಗರ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ
ಶರೀಫ್ ಇಬ್ರಾಹಿಂ ಮಾತನಾಡಿ, ಅಲ್ಪಸಂಖ್ಯಾತರಿಗೆ ಸ್ಥಾನಮಾನ ಏಕೆ ಕೊಡಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಾರ್ಯಕ್ರಮಗಳಿಗೆ ಹೋಗದಂತೆ ಶಶಿಧರ್ ತಡೆ ಮಾಡುತ್ತಿದ್ದರು. ಪಕ್ಷದ ಸಂಘಟನೆಗೆ 2.4 ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ ಎಂದರು.
ತಾ.ಪಂ.ಮಾಜಿ ಸದಸ್ಯ ರಫೀಕ್ ಇಬ್ರಾಹಿಂ ಮಾತನಾಡಿ, ಈ ಹಿಂದೆಯೂ ಬ್ಲಾಕ್ ಅಧ್ಯಕ್ಷರಾಗಿದ್ದ ಶಶಿಧರ್ ಮೇಲ್ಪಟ್ಟಕ್ಕೆ ಹೋಗಬೇಕೆ ವಿನಃ ಮತ್ರೆ ಅದೇ ಸ್ಥಾನಕ್ಕೆ ಆಸೆ ಪಡಬಾರದು. ಯುವಕರಿಗೂ ಅವಕಾಶ ಕಲ್ಪಿಸಬೇಕಿದೆ ಎಂದರು.
ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಮಾತನಾಡಿ, ಶಶಿಧರ್ ಅವರಿಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ಕೊಡಿ,ಅನಂತ ಕುಮಾರ್ ಬ್ಲಾಕ್ ಅಧ್ಯಕ್ಷರಾಗಿ ಮುಂದುವರೆಯಲಿ ಎಂಬ ಸಲಹೆಯನ್ನು ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಅವರಿಗೆ ನೀಡಿದ್ದೆ ಎಂದರು.
ಹೆಬ್ಬಾಲೆ ಗ್ರಾ.ಪಂ.ಅಧ್ಯಕ್ಷ ಎಚ್.ಎಸ್.ಮಂಜುನಾಥ್, ಸುಂಟಿಕೊಪ್ಪದ ರಫೀಕ್ ಇಬ್ರಾಹಿಂ ಮತ್ತಿತರರು ಮಾತನಾಡಿದರು.
ಈ ಸಂದರ್ಭ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಿ.ಎಂ.ಕಾಂತರಾಜು, ವಕ್ತಾರ ಟಿ.ಇ.ಸುರೇಶ್,
ಪ್ರಮುಖರಾದ ಎಚ್.ಬಿ.ಜಯಮ್ಮ, ಕುಮುದಾ ಧರ್ಮಪ್ಪ, ಗೀತಾ ಲಿಂಗಪ್ಪ, ಚಂದ್ರಶೇಖರ್, ಜನಾರ್ಧನ್, ಕೆ.ಎನ್.ಹೂವಯ್ಯ, ಶರತ್ ಶೇಖರ್, ಅಶ್ರಫ್, ಸಂದೀಪ್ ಮತ್ತಿತರರು ಇದ್ದರು.