ಕುಶಾಲನಗರ, ಸೆ 06: ಕುಶಾಲನಗರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಹುದೊಡ್ಡ ಕೊಡುಗೆ ನೀಡಿದೆ. ಮುಂದಿನ ದಿನಗಳಲ್ಲಿ ಕುಶಾಲನಗರದ ಅಭಿವೃದ್ದಿಗಾಗಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದರು. ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಗೆ ನೂತನವಾಗಿ ನೇಮಕಗೊಂಡ ಬಳಿಕ
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರ ತಾಲೂಕು ರಚನೆಯಲ್ಲಿ ಮುಂದಾಳತ್ವ ವಹಿಸಿದ್ದ ತಾನು ಗಡಿ ಗುರುತು ಮಾಡುವಲ್ಲಿ ಕೂಡ ಮುಖ್ಯ ಪಾತ್ರ ವಹಿಸಿದ್ದೆ. ಈ ನೂತನ ತಾಲೂಕು ಭಾಗದ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಕಗೊಂಡಿರುವುದು ಅತೀವ್ರ ಹರ್ಷ ತಂದಿದೆ. ಕಾಂಗ್ರೆಸ್ ಪಕ್ಷದ ಬಲವರ್ಧನೆಯೊಂದಿಗೆ ಊರಿನ ಅಭಿವೃದ್ಧಿ ಪರ ಚಳುವಳಿಗಳು, ಬೇಡಿಕೆಗಳ ಈಡೇರಿಕೆಗೆ ಸಮಾಜಮುಖಿ ಹೋರಾಟಗಳನ್ನು ಕೈಗೊಳ್ಳಲು ರೂಪುರೇಷೆ ಸಿದ್ದಪಡಿಸಲಾಗಿದೆ. ನೆನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆ, ಕಲಾಭವನ ಕಾಮಗಾರಿ, ಪುರಸಭೆ ರಚನೆ, ತಾಲೂಕು ಕಛೇರಿ ನಿರ್ಮಾಣಕ್ಕೆ ಉಂಟಾಗಿರುವ ತೊಡಕುಗಳ ಬಗ್ಗೆ ಪ್ರಶ್ನಿಸಲಾಗುವುದು. ಶಾಸಕರು ಕೂಡ ಇದಕ್ಕೆ ಉತ್ತರ ನೀಡಬೇಕಿದೆ. ಸರಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ, ಭೂಕಬಳಿಕೆ ದಂಧೆ, ಅವ್ಯವಹಾರಗಳ ವಿರುದ್ದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಬ್ಲಾಕ್ ವ್ಯಾಪ್ತಿಯ 18 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 90 ಬೂತ್ ಗಳಲ್ಲಿ ಪೂರ್ಣ ಪ್ರಮಾಣದ ಕಾಂಗ್ರೆಸ್ ಸಮಿತಿಗಳನ್ನು ರಚಿಸುವ ಮೂಲಕ ತನಗೆ ದೊರೆತಿರುವ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಲಾಗುವುದು. ಪಕ್ಷದೊಳಗೆ ಆರೋಗ್ಯಕರ ರಾಜಕಾರಣ, ಒಗ್ಗಟ್ಟು, ಐಕ್ಯತೆ, ಅನ್ಯೋನತೆ ಕಾಯ್ದುಕೊಳ್ಳಲಾಗುವುದು. ಪ್ರತಿಯೊಬ್ಬರ ಕಾಂಗ್ರೆಸಿಗನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.
ಬ್ಲಾಕ್ ನ ಐದು ಕಿ.ಮೀ ವ್ಯಾಪ್ತಿಯಲ್ಲಿ ನಾಲ್ವತ್ತೈದು ರಿಂದ 50 ಸಾವಿರ ಜನಸಂಖ್ಯೆ ಹೊಂದಿದೆ. ಈ ಮತಗಳು ನಿರ್ಣಾಯಕವಾಗಿದ್ದು ಸೋಲು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ಅಧಿಕಾರ ಸ್ವೀಕಾರ ಸಮಾರಂಭ ಹಮ್ಮಿಕೊಂಡಿದ್ದು ಸಮಾವೇಶದ ಮೂಲಕ ಅಧಿಕಾರ ಸ್ಚೀಕರಿಸಲಾಗುತ್ತದೆ. ಅದರೊಳಗೆ ಬ್ಲಾಕ್ ಕಾಂಗ್ರೆಸ್ ಕಛೇರಿಯನ್ನು ಕೂಡ ಆಯ್ಕೆಗೊಳಿಸಲಾಗುವುದು ಎಂದು ತಿಳಿಸಿದರು.
ನಗರ ಘಟಕದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ಗಾಂಧಿ ಜಯಂತಿಯಂದೇ ಒಟ್ಟಿಗೆ ನಗರ ಘಟಕವನ್ನು ಕೂಡ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಮಾಜಿ ನಗರ ಅಧ್ಯಕ್ಷ
ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸಂಯೋಜಕರ ಮಂಜುನಾಥ್ ಗುಂಡೂರಾವ್, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕಿರಣ್ ಕುಮಾರ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ಇದ್ದರು.
Back to top button
error: Content is protected !!