ಕುಶಾಲನಗರ, ಸೆ 06: ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸಭೆ ಸಮಿತಿ ಅಧ್ಯಕ್ಷರೂ ಆದ ಶಾಸಕ ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಆಸ್ಪತ್ರೆಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಯಿತು. ವೈದ್ಯಕೀಯ ಉಪಕರಣಗಳ ಖರೀದಿ, ದುರಸ್ಥಿ ಕಾರ್ಯಗಳು, ವೆಚ್ಚಕ್ಕಿರುವ ಬಿಲ್ ಗಳು, ಮುಕ್ತ ನಿಧಿ ಉಳಿಕೆ ಅನುದಾನದ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ರಕ್ಷಾ ಸಮಿತಿ ಸದಸ್ಯರು ಸಭೆಯ ಗಮನಕ್ಕೆ ತಂದರು. ಔಷಧಿಗಳನ್ನು ಹೊರಗಿನ ಮೆಡಿಕಲ್ ಗಳಿಂದ ಖರೀದಿಸಲು ತಿಳಿಸಲಾಗುತ್ತಿದೆ, ಗರ್ಭಿಣಿಯರ ವಾರ್ಡ್ ನಲ್ಲಿ ಬೆಡ್ ಗಳ ಕೊರತೆಯಿದೆ, ಸ್ಟೆರಲೈಜಿಂಗ್ ಯಂತ್ರ ಅಳವಡಿಸಲು ಬಂದವರಿಂದ 5 ಸಾವಿರ ಹಣ ಪಡೆದುಕೊಳ್ಳಲಾಗಿದೆ, ಆಕ್ಸಿಜನ್ ಯಂತ್ರಗಳ ಬಳಕೆ ಸಮರ್ಪಕವಾಗಿ ಆಗುತ್ತಿಲ್ಲ, ಶೌಚಾಲಯಗಳು ದುಸ್ಥಿತಿಯಲ್ಲಿವೆ ಎಂಬಿತಾದಿ ಸಮಸ್ಯೆಗಳ ಬಗ್ಗೆ ಸಮಿತಿ ಸದಸ್ಯರಾದ ಪ್ರವೀಣ್, ಗೌತಮ್, ಪ್ರಭಾಕರ್ ಸೇರಿದಂತೆ ಕೂಡುಮಂಗಳೂರು ಗ್ರಾಪಂ ಉಪಾಧ್ಯಕ್ಷ ಭಾಸ್ಕರ್ನಾಯಕ್ ಶಾಸಕ ಗಮನಕ್ಕೆ ತಂದರು.
ಇದೇ ಸಂದರ್ಭ ಸಭೆಯಲ್ಲಿದ್ದ ಡಿಎಚ್ಒ ಡಾ.ವೆಂಕಟೇಶ್ ಅವರು ಪ್ರತಿ ದಿನದ ಖರ್ಚು ವೆಚ್ಚಗಳು, ಲಭ್ಯವಿರುವ ಔಷಧಿಗಳ ಬಗ್ಗೆ ಚರ್ಟ್ ಸಿದ್ದಪಡಿಸುವಂತೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್ ಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಆಸ್ಪತ್ರೆಯಲ್ಲಿ ಉತ್ತಮ ರೀತಿಯ ಚಿಕಿತ್ಸೆ ಲಭ್ಯವಿದೆ. ರೋಗಿಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಆಸ್ಪತ್ರೆಯ ಪೈಂಟಿಂಗ್ ಮತ್ತು ಅಭಿವೃದ್ದಿ ಕಾಮಗಾರಿಗಳಿಗೆಂದು ರೂ 20 ಲಕ್ಷ ಒದಗಿಸಲಾಗಿದೆ. ತಾಪಂ ಮೂಲಕ ಕೂಡ ಅಗತ್ಯ ವಸ್ತುಗಳ ಖರೀದಿಗೆ ರೂ 10 ಲಕ್ಷ ಅನುದಾನ ಲಭ್ಯತೆಗೆ ಅನುಮೋದನೆ ನೀಡಲಾಗಿದೆ. ಲಯನ್ಸ್ ಸಂಸ್ಥೆಗೆ ನೀಡಿರುವ ಜಾಗವನ್ನು ಮರಳಿ ಪಡೆದು ಅವರಿಗೆ ಬದಲೀ ಜಾಗ ನೀಡಿ 100 ಬೆಡ್ ಗಳ ಆಸ್ಪತ್ರೆ ಯಾಗಿ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್, ತಾಲೂಕು ತಹಶೀಲ್ದಾರ್ ಟಿ.ಎಂ.ಪ್ರಕಾಶ್, ತಾಪಂ ಇಒ ಜಯಣ್ಣ, ಸಮಿತಿ ಸದಸ್ಯರಾದ ಡಾಟಿ, ಕುಮಾರಸ್ವಾಮಿ, ಉತ್ತಪ್ಪ, ಮುಳ್ಳುಸೋಗೆ ಗ್ರಾಪಂ ಅಧ್ಯಕ್ಷ ಚೆಲುವರಾಜು, ಕುಡಾ ಸದಸ್ಯರಾದ ವೈಶಾಖ್, ಪುಂಡರೀಕಾಕ್ಷ, ಪಪಂ ಸದಸ್ಯ ಅಮೃತ್ ರಾಜ್ ಮತ್ತಿತರರು ಇದ್ದರು.
Back to top button
error: Content is protected !!