ಕುಶಾಲನಗರ, ಆ 26: ಹುಣಸೂರಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ೫೧೩ನೇ ಜಯಂತೋತ್ಸವವನ್ನು ತಾಲ್ಲೂಕು ಒಕ್ಕಲಿಗರ ಸಂಘವು ನಗರದಲ್ಲಿ ಅದ್ದೂರಿಯಾಗಿ ಆಚರಿಸಿದರು.
ಬೆಳಿಗ್ಗೆ ನಗರದ ದೇವರಾಜ ಅರಸು ಪುತ್ಥಳಿಗೆ ಗೌರವ ಸಲ್ಲಿಸಿದ ನಂತರ ಮೆರವಣಿಗೆ ಆರಂಭವಾಯಿತು. ಅನೇಕ ಕಲಾತಂಡಗಳ ಕಲರವದ ನಡುವೆ ಕಳಶ ಹೊತ್ತಿದ್ದ ಹೆಂಗಳೆಯರು, ಕೈಯಲ್ಲಿ ಹಳದಿ ಬಾವುಟ ಹಿಡಿದು ಸಾಗಿಬಂದ ಜನರ ನಡುವೆ ವಾದ್ಯವೃಂದ, ತಮಟೆ, ನಗಾರಿ, ಡೊಳ್ಳುಕುಣಿತ, ವೀರಗಾಸೆ ಹೀಗೆ ಅನೇಕ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿತ್ತು, ಮಂಜುನಾಥ ದೇವಾಲಯದ ಬಳಿ ಹತ್ತಾರು ಜೆಸಿಬಿ ವಾಹನದ ಮೇಲೆ ನಿಂತು ಮೆರವಣಿಗೆಯಲ್ಲಿ ಬಂದವರಿಗೆ ಪುಷ್ಪವೃಷ್ಠಿಗೈದರು. ಹನಗೋಡಿನಿಂದ ನೂರಕ್ಕೂ ಹೆಚ್ಚು ಬೈಕ್‌ನಲ್ಲಿ ಹಳದಿ ಬಾವುಟ ಹಿಡಿದು ಹುಣಸೂರುವರೆಗೆ ರ‍್ಯಾಲಿ ನಡೆಸಿದರು.
ಕುಮಾರಸ್ವಾಮಿಗೆ ಬೃಹತ್ ಹಾರ : ಕಲ್ಪತರು ವೃತ್ತದ ಬಳಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಸಾ.ರಾ.ಮಹೇಶ್ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿದ್ದಲ್ಲದೇ ಬಾರೀ ಹೂವಿನ ಹಾರವನ್ನು ಕ್ರೇನ್ ಮೂಲಕ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಅಲ್ಲಿಂದಲೇ ಸಮಾರಂಭಕ್ಕೆ ಮೆರವಣಿಗೆಯಲ್ಲಿ ಸಾಗಿಬಂದರು. ಆದಿಚುಂಚನಗಿರಿ ಡಾ.ನಿರ್ಮಲಾನಂದಸ್ವಾಮೀಜಿ, ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿಯವರು ನೇರವಾಗಿ ವೇದಿಕೆಗೆ ಆಗಮಿಸಿದರು. ಕುಮಾರಸ್ವಾಮಿಯವರು ತಮ್ಮ ಭಾಷಣ ಮುಗಿದ ನಂತರ ಡಾ.ನಿರ್ಮಲಾನಂದ ಸ್ವಾಮೀಜಿಯವರೊಂದಿಗೆ ತುಮಕೂರಿನ ಕಾರ್ಯಕ್ರಮಕ್ಕೆ ಹೆಲಿಕ್ಯಾಪ್ಟರ್‌ನಲ್ಲಿ ತೆರಳಿದರು.
ಡಿಕೆಶಿಗೆ ಭವ್ಯ ಸ್ವಾಗತ : ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‌ನಲ್ಲಿ ಶಾಸಕ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಕರ್ತರು ಬೈಕ್ರ‍್ಯಾಲಿ ಮೂಲಕ ವೇದಿಕೆವರೆಗೆ ಕರೆತಂದರಲ್ಲದೆ, ಕಾಂಗ್ರೆಸ್ ಕಛೇರಿ ಬಳಿ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದರು.
ಸ್ವಾಮೀಜಿಗಳಿಗೆ ಬೆಳ್ಳಿಕಿರೀಟ :
ಒಕ್ಕಲಿಗರ ಸಂಘದ ವತಿಯಿಂದ ಹಾಗೂ ಶಾಸಕ ಎಚ್.ಪಿ.ಮಂಜುನಾಥರು ಇರ್ವರು ಸ್ವಾಮೀಜಿಗಳಿಗೆ ಬೆಳ್ಳಿ ಕಿರೀಟತೊಡಿಸಿ, ಬೃಹತ್ ಹಾರಹಾಕಿ ಗೌರವಿಸಿದ್ದು, ಬಂದಿದ್ದ ಸಾವಿರಾರು ಮಂದಿಗೆ ಅಚ್ಚುಕಟ್ಟಾದ ಊಟದ ವ್ಯವಸ್ಥೆ, ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಮಾರಂಭದಲ್ಲಿ ಒಕ್ಕಲಿಗ ಸಮುದಾಯದ ಸಾಧಕ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು. ವೇದಿಕೆಯಲ್ಲಿ ಸಾಕಷ್ಟು ನೂಕುನುಗ್ಗಲು ಉಂಟಾಗಿತ್ತು.
Back to top button
error: Content is protected !!