ಶಿಕ್ಷಣ
ಗುಮ್ಮನಕೊಲ್ಲಿ ಸಹಿಪ್ರಾ ಶಾಲಾ ಮಕ್ಕಳಿಗೆ ಮುತ್ತೂಟ್ ಮಿನಿ ಫೈನಾನ್ಸ್ ವತಿಯಿಂದ ನೋಟ್ ಪುಸ್ತಕ, ಬ್ಯಾಗ್ ವಿತರಣೆ
ಕುಶಾಲನಗರ, ಆ 26: ಬಾಲ್ಯದಿಂದಲೇ ಓದಿನ ಬಗ್ಗೆ ಆಸಕ್ತಿ ತೋರಲು ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದು ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ನ ಪ್ರಾಂತೀಯ ವ್ಯವಸ್ಥಾಪಕ ವಿನಾಯಕ ಕೇಶವ್ ನಾಯಕ್ ಕಿವಿಮಾತು ಹೇಳಿದರು.
ಗುಮ್ಮನಕೊಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ವತಿಯಿಂದ ಉಚಿತ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ನಿಖರ ಗುರಿ ಹಾಗೂ ಸದೃಢ ಮನೋಭಾವವನ್ನು ಹೊಂದಿದಾಗ ಮಾತ್ರ ಶೈಕ್ಷಣಿಕ ಸಾಧನೆ ಸಾಧ್ಯ ಎಂದರು. ನಂತರ ಕೂಡು ಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರೇಮ್ ಕುಮಾರ್ ಮಾತನಾಡಿ ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಸಂಘ-ಸಂಸ್ಥೆಗಳ ನೆರವು ಅಗತ್ಯವಾಗಿದೆ. ಅಭಿವೃದ್ಧಿ ಕಾರ್ಯಗಳ ಜೊತೆ ಜೊತೆಯಲ್ಲಿ ಉತ್ತಮ ಶಿಕ್ಷಣಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿಕೊಂಡಲ್ಲಿ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯವೆಂದರು. ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ವತಿಯಿಂದ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಾಗ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ನಂತರ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಮಣಿ ಮಾತನಾಡಿ, ಮಕ್ಕಳು ಸತ್ಪ್ರಜೆಗಳಾಗಿ ಬೆಳೆಯುವಲ್ಲಿ ವಿದ್ಯೆ ಪ್ರಮುಖ ಪಾತ್ರ ವಹಿಸುತ್ತದೆ ದಾನಿಗಳು ನೀಡಿದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಶ್ರೇಷ್ಠ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಆಸಿಫ್, ಗಣೇಶ್, ಶಾಲಾ ಮುಖ್ಯ ಶಿಕ್ಷಕಿ ಸಾಕಮ್ಮ, ಎಸ್. ಡಿ.ಎಂ.ಸಿ ಅಧ್ಯಕ್ಷೆ ಶೃತಿ, ಶಿಕ್ಷಕರಾದ ಬಸವರಾಜ್, ಶಾಂತಿ, ನಳಿನಿ, ಮುತ್ತೂಟ್ ಮಿನಿ ಫೈನಾನ್ಸಿಯರ್ಸ್ ಲಿಮಿಟೆಡ್ ನ ಕುಶಾಲನಗರದ ಶಾಖಾ ವ್ಯವಸ್ಥಾಪಕ ನವೀನ್ ಕುಮಾರ್, ವಿನೋದ್, ಬಿದ್ದಪ್ಪ, ವಿದ್ಯಾ, ಬಿಂದು, ಪೂಜಾ ಮತ್ತಿತರರು ಹಾಜರಿದ್ದರು.