ಕುಶಾಲನಗರ, ಜ 04: ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಹುಲುಸೆ ಗ್ರಾಮದಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರ ನಿರ್ಮಾಣ ಯೋಜನೆ ಹಿನ್ನೆಲೆಯಲ್ಲಿ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆಯಿತು.
ಹುಲುಸೆಯ 1/1 ಸರ್ವೆ ನಂಬರ್ನಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರಕ್ಕೆ ಕಂದಾಯ ಇಲಾಖೆಯಿಂದ ಸ್ಥಳ ಗುರುತಿಸಲಾಗಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಕೂಡ ದಿಡೀರನೆ ಗುಡ್ಡ ಅಗೆಯುವ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಆರೋಪಿಸಿ ಹಕ್ಕೆ, ಮರೂರು ಗ್ರಾಮಸ್ಥರು ಹಿಟಾಚಿ ತಡೆಹಿಡಿದು ಕಾಮಗಾರಿ ನಿಲ್ಲಿಸಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿದರು.
ಇಲ್ಲಿ ನಾಯಿಗಳ ಸಂರಕ್ಷಣಾ ಕೇಂದ್ರ ಸ್ಥಾಪಿಸಲು ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ಪಡೆದಿಲ್ಲ. ಕಾಮಗಾರಿ ಕಾರಣ ಅಪಾರ ಪ್ರಮಾಣದಲ್ಲಿ ಮರಗಳ ಹನನ ನಡೆಯಲಿದೆ, ಪರಿಸರಕ್ಕೆ ಹಾನಿ ಉಂಟಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಈಗಾಗಲೆ ಗ್ರಾಪಂ, ತಾಲೂಕು ಆಡಳಿತ ಸೇರಿದಂತೆ ಸಂಬಂಧಿಸಿದವರಿಗೆ ಆಕ್ಷೇಪಣೆ ಸಲ್ಲಿಸಿದ್ದರೂ ಕೂಡ ರಾತ್ರೋರಾತ್ರಿ ಗುತ್ತಿಗೆದಾರರ ಮೂಲಕ ಕಾಮಗಾರಿ ಆರಂಭಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿ ಬೀದಿ ನಾಯಿಗಳ ಸಂರಕ್ಷಣಾ ಕೇಂದ್ರ ಸ್ಥಾಪಿಸಬಾರದು. ಒಂದು ವೇಳೆ ಮುಂದಾದಲ್ಲೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭ ಹೆಬ್ಬಾಲೆ ಗ್ರಾಪಂ ಸದಸ್ಯೆ ಪುಟ್ಟಲಕ್ಷ್ಮಿ, ಸಾಮಾಜಿಕ ಹೋರಾಟಗಾರ ಮೋಹನ್, ಗ್ರಾಮಸ್ಥರಾದ ಮೂರ್ತಿ, ಚೆಲುವರಾಜು, ಶಿವರಾಜಕುಮಾರ್, ಜವರಯ್ಯ, ದಿಲೀಪ್ ಕುಮಾರ್, ಸುರೇಶ್, ಮಾದೇವ, ಚೆಲುವರಾಜು, ಸೂರಿ, ಮಾದ, ಜಯಮ್ಮ,ಮಮತಾ, ಜವರಮ್ಮ,ಮಲ್ಲಮ್ಮ,ಮಾದೇವಿ, ಜ್ಯೋತಿ, ಪೃಥ್ವಿ, ಶಶಾಂಕ್, ತರುಣ್, ಹಳಗೋಟೆ ಮಂಜು,ಲೋಕೇಶ, ದೇವರಾಜ್ ಮತ್ತಿತರರು ಇದ್ದರು.
Back to top button
error: Content is protected !!