ಕಾರ್ಯಕ್ರಮ

ಅನುಗ್ರಹ ಕಾಲೇಜಿನಲ್ಲಿ ಜನಪದ ಕಲೆಯ ಕುರಿತ ಉಪನ್ಯಾಸ ಕಾರ್ಯಕ್ರಮ

ಕುಶಾಲನಗರ ಏ 15:ಜನಪದರಿಂದ ಸೃಷ್ಟಿಸಲ್ಪಟ್ಟ ಕಲೆಗಳು ಕೇವಲ ಮನರಂಜನೆಯ ಸರಕಲ್ಲ ನಮ್ಮ ಸಂಸ್ಕೃತಿಯ ಜೀವಾಳವಾಗಿವೆ. ಮನರಂಜನೆ ನೀಡುವುದರ ಜೊತೆಗೆ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡುತ್ತದೆ ಎಂದು ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ.ಜ಼ಮೀರ್ ಅಹಮದ್‌ ಅಭಿಪ್ರಾಯಿಸಿದರು.

ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಅನುಗ್ರಹ ಕಾಲೇಜು ಸಂಭಾಗಣದಲ್ಲಿ ಆಯೋಜಿಸಿದ್ದ ದಿ.ಹಂಚೆಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿಗಳ ಜ್ಞಾಪಕಾರ್ಥ
ಜನಪದ ಕಲೆಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ತನ್ನ ಕಷ್ಟ-ಸುಖಗಳನ್ನು ವ್ಯಕ್ತಪಡಿಸುವುದಕ್ಕೆ ಭಾವನಾತ್ಮಕ ಸಂವಹನ ಕ್ರಿಯೆಯಾಗಿ ಜನಪದ ಕಲೆಯ ಪಾತ್ರ ಮುಖ್ಯವಾದುದು. ತಲೆಮಾರಿನಿಂದ ತಲೆಮಾರಿಗೆ ಮೌಖಿಕ ಪರಂಪರೆಯ ಮೂಲಕ ಸಮುದಾಯಗಳ, ಸಂಪ್ರದಾಯ, ನಂಬಿಕೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆ.
ಜನಪದವು ಪ್ರತಿಯೊಂದು ಪ್ರದೇಶದ ವಿಶಿಷ್ಟ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಹಿಡಿಯುತ್ತದೆ. ಕರ್ನಾಟಕವು ಶ್ರೀಮಂತ ಜಾನಪದ ಪರಂಪರೆಯನ್ನು ಹೊಂದಿದ್ದು, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಯಕ್ಷಗಾನ ಮತ್ತು ಭೂತಾರಾಧನೆಯಂತಹ ವೈವಿಧ್ಯಮಯ ನೃತ್ಯ, ಗೀತೆ ಹಾಗೂ ಕಲಾ ಪ್ರಕಾರಗಳನ್ನು ಒಳಗೊಂಡಿದೆ.
ಈ ಜನಪದ ಕಲೆಗಳು ಕೃಷಿ ಸಂಸ್ಕೃತಿ, ದೈವಾರಾಧನೆ ಮತ್ತು ವೀರಗಾಸೆಯಂತಹ ಪೌರಾಣಿಕ ಕಥೆಗಳನ್ನು ಚಂಚಿಸುತ್ತವೆ, ಇವು ಗ್ರಾಮೀಣ ಜೀವನದ ಸಾಂಸ್ಕೃತಿಕ ಬೇರುಗಳಾಗಿವೆ. ಜನಪದ ನೃತ್ಯಗಳು, ರಂಗಭೂಮಿ ಮತ್ತು ಗೀತೆಗಳು ಜನಪದ ಸಾಹಿತ್ಯದ ಪ್ರಾಮುಖ್ಯತೆಯನ್ನು ಸಾರುತ್ತದೆ ಎಂದರು.
ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್, ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತೆಗೆಯಲು ಇಂತಹ ವೇದಿಕೆಗಳು ಸದ್ಬಳಕೆಯಾಗುತ್ತದೆ. ಹಿರಿಯರ ಹೆಸರುಗಳನ್ನು ಶಾಶ್ವತವಾಗಿ ಉಳಿಯುವಂತೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಒಂದಷ್ಟು ಹಣ ದೇಣಿಗೆ ನೀಡುತ್ತಾರೆ. ಅದರಲ್ಲಿ ಬರುವ ಬಡ್ಡಿ ಹಣದಲ್ಲಿ ಸಾಹಿತ್ಯ ಕೃಷಿಯನ್ನು ಮಾಡಿ, ಹಿರಿಯರ ಹೆಸರು ಅಜರಾಮರವಾಗಿ ಉಳಿಯುತ್ತೆ ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಕೆ ಎಸ್ ನಾಗೇಶ್ ಮಾತನಾಡಿ, ವಿಧ್ಯಾರ್ಥಿಗಳು ಜನಪದ ಕಲೆಯ ತರಹ ತೆರೆದುಕೊಳ್ಳಬೇಕು. ಆ ಮೂಲಕ ತಮ್ಮ ತಮ್ಮ ಪ್ರತಿಭೆಗಳನ್ನು ಜಗತ್ತಿಗೆ ತೋರಿಸಬೇಕು ಎಂದು ಕರೆ ನೀಡಿದರು.
ದತ್ತಿ ದಾನಿಗಳಾದ ಪ್ಯಾನ್ಸಿ ಮುತ್ತಣ್ಣ ಮಾತನಾಡಿ, ಜನಪದ ಎನ್ನುವುದು ಸಂಬಂಧಗಳನ್ನು ಬೆಸೆಯುತ್ತದೆ. ವಿಧ್ಯಾರ್ಥಿ ಜೀವನದಲ್ಲಿ ಸಾಕಷ್ಟು ಸಂತೋಷದ ವಿಚಾರಗಳನ್ನು ಸೃಷ್ಟಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರು. ಎಲ್ಲರ ಒತ್ತಾಯಕ್ಕೆ ಮಣಿದು ಜೋಕೆ ನಾನು ಬಳ್ಳಿಯ ಮಿಂಚು ಹಾಡು ಹೇಳಿ ರಂಜಿಸಿದರು.
ದರ್ಶನ್ ಮತ್ತು ಶೆಲ್ಲಿ ಎಂಬ ವಿಧ್ಯಾರ್ಥಿಗಳು ಜನಪದ ಹಾಡು ಹೇಳುವ ಮೂಲಕ ಎಲ್ಲರ ಗಮನ ಸೆಳೆದರು.
ಅನುಗ್ರಹ ಕಾಲೇಜು ಪ್ರಾಂಶುಪಾಲೆ ಡಾ. ಬಿ.ಡಿ.ಚೈತ್ರ, ಕಸಾಪ ಕಾರ್ಯದರ್ಶಿ ಶೈಲ ಪ್ರೇಮಕುಮಾರ್, ಕೋಶಾಧಿಕಾರಿ ಉಮೇಶ್, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ ಎನ್ ಮೂರ್ತಿ, ನಿರ್ದೇಶಕರಾದ ಎಂ.ಎನ್.ಕಾಳಪ್ಪ, ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಲೀಲಾ ಕುಮಾರಿ ತೊಡಿಕಾನ ಅವರು ಕಾರ್ಯಕ್ರಮ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!