ಕಾರ್ಯಕ್ರಮ

ವಾಸವಿ ಜಯಂತಿ ಅಂಗವಾಗಿ ಕುಶಾಲನಗರದಲ್ಲಿ ರಕ್ತದಾನ ಶಿಬಿರ

ಕುಶಾಲನಗರ, ಏ 16: ಕುಶಾಲನಗರದ ವಾಸವಿ ಯುವಜನ ಸಂಘ ಮತ್ತು ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ವಾಸವಿ ಜಯಂತಿಯ ಅಂಗವಾಗಿ ಬುಧವಾರ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ವಾಸವಿ ಮಹಲ್ ಹಿಂಭಾಗದಲ್ಲಿ ನಡೆದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ. ಕೆ.ಎನ್.ಶಿವಕುಮಾರ್, ರಕ್ತದಾನದ ಬಗ್ಗೆ ಇರುವ ಭಯ ಹಾಗೂ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಹಾಗಾದಲ್ಲಿ ಮಾತ್ರ ರಕ್ತದಾನಿಗಳು ಹೆಚ್ಚಾಗಲು ಸಾಧ್ಯ.
ಯುವ ಸಮೂಹ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳುವಂತಾಗಬೇಕಿದೆ. ಹಾಗಾಗಿ ಅವರಲ್ಲಿ ರಕ್ತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.

ಮಡಿಕೇರಿ ರಕ್ತನಿಧಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಕರಂಬಯ್ಯ ಮಾತನಾಡಿ, ವಾಸವಿ ಯುವಜನ ಸಂಘದ ವತಿಯಿಂದ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ವಿಚಾರ. ರಕ್ತದ ಅವಶ್ಯಕತೆ ಅತಿ ಹೆಚ್ಚಿದ್ದು ಇತರೆ ಸಂಘ ಸಂಸ್ಥೆಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರದಲ್ಲಿ ಆಯೋಜಿಸುವಂತೆ ಕೋರಿದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕಾರ್ಯಕಾರಿ ಮಂಡಳಿ ಸದಸ್ಯರಾದ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕೋವಿಡ್ ಕಾಲಘಟ್ಟದಲ್ಲಿ ಸರಕಾರದ ಕೋರಿಕೆಯಂತೆ ಆರ್ಯ ವೈಶ್ಯ ಸಮಾಜದ ವತಿಯಿಂದ ರಾಜ್ಯಾದ್ಯಂತ 6 ಸಾವಿರ ಯೂನಿಟ್ ರಕ್ತ ಸಂಗ್ರಹಿಸಿಕೊಟ್ಟ ಸಾಧನೆಯನ್ನು ವಿವರಿಸಿದರು.

ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಪ್ರವೀಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಬಿರದಲ್ಲಿ ಒಟ್ಟು 44 ಮಂದಿ ರಕ್ತದಾನ ಮಾಡಿದರು. 50ನೇ ಬಾರಿ ರಕ್ತದಾನ ಮಾಡಿದ ಎಲ್ ಸಂತೋಷ್ ಎಂಬವರನ್ನು ವಾಸವಿ ಯುವಜನ ಸಂಘದ ವತಿಯಿಂದ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕೊಡಗು ಜಿಲ್ಲಾ ಅಧ್ಯಕ್ಷರ ಬಿ.ಎಲ್. ಸತ್ಯನಾರಾಯಣ, ಆರ್ಯವೈಶ್ಯ ಮಂಡಳಿಯ ಕಾರ್ಯದರ್ಶಿ ಬಿ.ಎಲ್. ಅಶೋಕ್, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವತಿಯರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಅಶ್ವಿನಿ ಸುಂದರ್, ವಾಸವಿ ಯುವಜನ ಸಂಘದ ಕಾರ್ಯದರ್ಶಿ ಬಿ.ಎನ್. ಅಂಜನ್, ಉಪಾಧ್ಯಕ್ಷ ವೈಶಾಖ್ ವಿ, ಬಾಲಾಜಿ ವಿ. ಜೆ, ಸಹಕಾರ್ಯದರ್ಶಿ ನಾಗಶ್ರೇಯಸ್ಸ್ ವಿ ಎಂ , ನಿರ್ದೇಶಕರಾದ ನಿಖಿಲ್ ಎನ್, ರವಿಪ್ರಕಾಶ್‌ ಎಂ.ಬಿ, ರಾಕೇಶ್ ಪಿ. ಆರ್. ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!
WhatsApp us