ಕುಶಾಲನಗರ, ಮಾ 20: ಕುಶಾಲನಗರದ ನಿವಾಸಿಗಳಿಗೆ ಕುಡಿವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ಜಲಮಂಡಳಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕುಶಾಲನಗರ ನಗರ ಬಿಜೆಪಿ ನಿಯೋಗ ಸ್ಥಳೀಯ ಜಲಮಂಡಳಿಗೆ ಲಗ್ಗೆ ಇಟ್ಟು ಮನವಿ ಸಲ್ಲಿಸಿತು.
ಬಿಜೆಪಿ ನಗರ ಅಧ್ಯಕ್ಷ ಎಂ.ಎಂ.ಚರಣ್ ನೇತೃತ್ವದ ನಿಯೋಗ ಜಲಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನಕುಮಾರ್ ಹಾಗೂ ಸಹಾಯಕ ಅಭಿಯಂತರ ಬಿಪಿನ್ ಅವರಲ್ಲಿ ಕುಡಿವ ನೀರಿನ ಪರ್ಯಾಯ ವ್ಯವಸ್ಥೆಗಳ ಕುರಿತು ಪರಾಮರ್ಶೆ ನಡೆಸಿತು.
ಈ ಸಂದರ್ಭ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಎಂ.ಎಂ.ಚರಣ್, ಕುಶಾಲನಗರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ವಾಸವಿರುವ ಬಡ, ನಿರ್ಗತಿಕ ಹಾಗೂ ಅಮಾಯಕ ಮಂದಿಗೆ ಕುಡಿವ ನೀರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಜಲಮಂಡಳಿಯ ಟ್ಯಾಂಕರ್ ಗಳಿಂದ ಪೂರೈಸುವ ಕುಡಿವ ನೀರಿಗೆ ಜನಸಾಮಾನ್ಯರಿಂದ ಯಾವುದೇ ಹಣ ಪಡೆಯದೇ ಉಚಿತವಾಗಿ ಪೂರೈಸಬೇಕು.
ಜಲಮಂಡಳಿಯ ಟ್ಯಾಂಕರ್ ಗಳಿಂದ ಪೂರೈಸುವ ನೀರಿನ ಬಗ್ಗೆ ಬಡಾವಣೆಗಳ ನಿವಾಸಿಗಳಿಗೆ ಮುಂಗಡವಾಗಿ ಮಾಹಿತಿ ನೀಡಬೇಕು.
ಬೇಸಿಗ ಮುಗಿದು ಕಾವೇರಿ ನದಿಯಲ್ಲಿ ನೀರು ಸರಾಗವಾಗಿ ಹರಿಯುವವರೆಗೂ ಜಲಮಂಡಳಿ ಅಧಿಕಾರಿಗಳು ಕುಶಾಲನಗರದ ಜನತೆಗೆ ಪರಿಪೂರ್ಣ ಪ್ರಮಾಣದಲ್ಲಿ ನೀರನ್ನು ಪೂರೈಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ಕುಶಾಲನಗರದ ಜನತೆಗೆ ಕುಡಿವ ನೀರಿಗೆ ಸಮಸ್ಯೆ ಕಾಡದಂತೆ ಶಾಶ್ವತ ಯೋಜನೆ ರೂಪಿಸಬೇಕಿದೆ.
ಕುಶಾಲನಗರದ ಕಾವೇರಿ ನದಿಯ ಜಾಕ್ ವೆಲ್ ಬಳಿ ನದಿಗೆ ಅಡ್ಡಲಾಗಿ ಕಟ್ಟೆಕಟ್ಟುವ ಮೂಲಕ ಬೇಸಗೆಯಲ್ಲಿ ನೀರಿನ ಸಂಗ್ರಹ ನಿರ್ವಹಣೆ ಮಾಡುವ ಯೋಜನೆ ರೂಪಿಸಬೇಕಿದೆ. ತಾತ್ಕಾಲಿಕವಾಗಿ ಜಾಕ್ ವೆಲ್ ಬಳಿ ಮರಳು ಚೀಲಗಳನ್ನು ಜೋಡಿಸಿ ನೀರು ಸಂಗ್ರಹಿಸಬೇಕು.
ನೀರು ಸ್ಥಗಿತಗೊಂಡ ಅವಧಿಯ ನೀರಿನ ಕರವನ್ನು ಸಾರ್ವಜನಿಕರಿಂದ ಸಂಗ್ರಹಿಸದೇ
ಸರ್ಕಾರಕ್ಕೆ ಪತ್ರ ಬರೆದು ಸರ್ಕಾರದಿಂದಲೇ ಅಗತ್ಯವಾದ ಅನುದಾನ ಪಡೆದುಕೊಳ್ಳಲಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಜೈವರ್ಧನ್ ಮಾತನಾಡಿ, ಚಿಕ್ಲಿಹೊಳೆಯಲ್ಲಿ ಲಭ್ಯವಿರುವ ನೀರನ್ನು ಕಾವೇರಿ ನದಿಗೆ ಹರಿಸಿ ಸದ್ಯದ ಪರಿಸ್ಥಿತಿಯಲ್ಲಿ ಕುಶಾಲನಗರಕ್ಕೆ ಎದುರಾಗಿರುವ ಕುಡಿವ ನೀರಿನ ಬವಣೆಯನ್ನು ನೀಗಿಸಿಕೊಳ್ಳುವ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಾತನಾಡಿ, ಜಲಮಂಡಳಿ ಕಳೆದ ವರ್ಷ ವಿತರಿಸಿದ ನೀರಿಗೆ ಸಾರ್ವಜನಿಕರಿಂದ ಅಲ್ಲಲ್ಲಿ ಹಣ ಪಡೆದ ದೂರುಗಳಿದ್ದವು. ಈ ಬಾರಿ ಹಾಗಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು.
ನದಿಯಲ್ಲಿ ಕೃಷಿ ಬಳಕೆಗೆ ನೀರನ್ನು ಬಳಸದೇ ಕೇವಲ ಕುಡಿವ ನೀರಿಗೆ ಆದ್ಯತೆ ಕೊಡುವಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು.
ಬಳಿಕ ಪ್ರತಿಕ್ರಿಯಿಸಿದ ಜಲಮಂಡಳಿ ಎಇಇ ಪ್ರಸನ್ನ ಕುಮಾರ್, ಜಲಮಂಡಳಿಯಿಂದ ಜನಸಾಮನ್ಯರಿಗೆ ಕುಡಿವ ನೀರು ಪೂರೈಸಲು ಮೂರು ಟ್ಯಾಂಕರ್ ಗಳ ಮೂಲಕ ಉಚಿತ ನೀರು ಪೂರೈಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಈಗಾಗಲೇ ಪಟ್ಟಣದ ಐದು ಕಡೆಗಳಲ್ಲಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದ್ದು ಅಲ್ಲಿಂದ ಟ್ಯಾಂಕರ್ ಗಳಿಗೆ ತುಂಬಿಸಿ ನೀರು ಪೂರೈಸಲಾಗುವುದು.
ಮಳೆ ಬಂದು ನದಿಯಲ್ಲಿ ನೀರು ಹರಿದು ಬರುವವರೆಗೂ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕಿದೆ. ಪುರಸಭೆಯ ವತಿಯಿಂದ ನೀರು ಪೂರೈಕೆ ಮಾಡುತ್ತಿರುವ ಪ್ರದೇಶಗಳ ಜವಬ್ದಾರಿ ಅವರೇ ನಿರ್ವಹಿಸಬೇಕು. ಜಲಮಂಡಳಿಯಿಂದ ವಿತರಿಸುವ ನೀರಿನ ಮಾರ್ಗದ ನಿವಾಸಿಗಳಿಗೆ ಕುಡಿವ
ನೀರಿಗೆ ಸಮಸ್ಯೆ ಕಂಡುಬಂದಲ್ಲಿ ನೇರವಾಗಿ ಜಲಮಂಡಳಿಯ ಸಹಾಯಕ ಇಂಜಿನಿಯರ್ ಬಿಪಿನ್ ಅವರ *89701* *23669* ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಪ್ರಸನ್ನಕುಮಾರ್ ತಿಳಿಸಿದರು.
ನಿಯೋಗದಲ್ಲಿ ಪುರಸಭೆ ಸದಸ್ಯ ಬಿ.ಅಮೃತ್‌ರಾಜ್, ಬಿಜೆಪಿ ಪ್ರಮುಖರಾದ ಕೆ.ಜಿ.ಮನು, ಕೃಷ್ಣಪ್ರಸಾದ್, ಶಿವಾಜಿ, ವೈಶಾಕ್, ಪ್ರವೀಣ್ ಇದ್ದರು.
Back to top button
error: Content is protected !!