ಕುಶಾಲನಗರ, ಫೆ 15: ಕುಶಾಲನಗರ ತಾಲೂಕಿನ ತೊರೆನೂರು ವಿರಕ್ತ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಂತ ಮಹಾಸ್ವಾಮಿಗಳ (13ನೇ ವರ್ಷ) ದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮ ಫೆ. 23 ರ ಭಾನುವಾರ ತೊರೆನೂರು ವಿರಕ್ತ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಠಾಧ್ಯಕ್ಷರಾದ ಶ್ರೀ ಮಲ್ಲೇಶ ಸ್ವಾಮಿಗಳು ತಿಳಿಸಿದರು.
ಕುಶಾಲನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪುಣ್ಯ ಸಂಸ್ಮರಣೋತ್ಸವ ಅಂಗವಾಗಿ ಲಿಂಗೈಕ್ಯ ಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಪೂಜಾ ಕೈಂಕರ್ಯಗಳು ಜರುಗಲಿವೆ. ನಂತರ ಪಾಲ್ಗೊಂಡ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಲಿದೆ.
ಮನೆಹಳ್ಳಿ ಶ್ರೀ ತಪೋವನ ಕ್ಷೇತ್ರದ ಶ್ರೀ ಗುರು ಸಿದ್ದವೀರೇಶ ಸ್ವಾಮೀಜಿ
ಮತ್ತು ನಾಡಿನ ಪರಮಪೂಜ್ಯ ಹರಗುರು ಚರಮೂರ್ತಿಗಳವರ ಸಮ್ಮುಖದಲ್ಲಿ ಸಂಸ್ಮರಣೋತ್ಸವ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾಮಿಗಳ ಕೃಪೆಗೆ ಪಾತ್ರರಾಗುವಂತೆ ಅವರು ಕೋರಿದರು.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿ, ಅಂದಿನ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುನಿತಾ ಮಹೇಶ್ ಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ, ಖಜಾಂಚಿ ಉದಯಕುಮಾರ್, ತಾಲೂಕು ಅಧ್ಯಕ್ಷ ಹೆಚ್.ಎಂ.ಮಧುಸೂದನ್, ನಿರ್ದೇಶಕ ಶುಭಶೇಖರ್, ಮುಖಂಡ ಪುಟ್ಟರಾಜು ಇದ್ದರು.