ಕುಶಾಲನಗರ, ಫೆ 13: ಒಳಚರಡಿ ಯೋಜನೆ ಕಾಮಗಾರಿ ಹಾಗೂ ಅಮೃತ್-2 ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಶಾಸಕರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಲು ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಕುಶಾಲನಗರ ಪುರಸಭೆಯ ಸಾಮಾನ್ಯ ಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಯುಜಿಡಿ ಕಾಮಗಾರಿ ವಿಳಂಭದ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ಪೂರ್ಣಗೊಳಿಸುವುದು, ಲೋಕಾರ್ಪಣೆಗೊಳಿಸುವುದು ಸೇರಿದಂತೆ ಭವಿಷ್ಯದಲ್ಲಿ ನಿರ್ವಹಣೆ ಮಾಡುವ ವಿಚಾರದ ಬಗ್ಗೆ ಒಳಚರಂಡಿ ಮಂಡಳಿ ಅಧಿಕಾರಿ ಪ್ರಸನ್ನ ಅವರೊಂದಿಗೆ ಸದಸ್ಯರು ಗಂಭೀರ ಚರ್ಚೆ ನಡೆಸಿದರು. ಈ ಸಂಬಂದ ಕ್ಷೇತ್ರ ಶಾಸಕರ ಸಮ್ಮುಖದಲ್ಲಿ ವಿಶೇಷ ಸಭೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯ ಆರಂಭದಲ್ಲಿ ಮನೆಗಳ್ಳತನ, ರಾಸುಗಳ ಕಳ್ಳತನ ಎಲ್ಲೆ ಮೀರಿದ್ದು ಸೂಕ್ತ ಕ್ರಮವಹಿಸುವಂತೆ ಸದಸ್ಯ ಜಿ.ಬಿ.ಜಗದೀಶ್, ಎಂ.ಎಂ.ಪ್ರಕಾಶ್ ಪೊಲೀಸ್ ಅಧಿಕಾರಿಯನ್ನು ಆಗ್ರಹಿಸಿದರು.
ವಿದ್ಯುತ್ ಕಂಬಗಳ ಬದಲಾವಣೆ, ಬೀದಿ ದೀಪಗಳ ನಿರ್ವಹಣೆ ಮತ್ತಿತರ ವಿದ್ಯುತ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ವಿಳಂಭ ಹಾಗೂ ಸಮಸ್ಯೆಗಳ ಬಗ್ಗೆ
ಚೆಸ್ಕಾಂ ಅಧಿಕಾರಿಯೊಂದಿಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿರುವ ಕೆರೆಗಳ ಅಭಿವೃದ್ಧಿಗೆ ಕ್ರಮವಹಿಸಲು ಸದಸ್ಯ ಡಿ.ಕೆ.ತಿಮ್ಮಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು, ಕೆರೆಗಳ ಅಭಿವೃದ್ಧಿಗೆ ಈಗಾಗಲೆ ಅಗತ್ಯ ಕ್ರಮವಹಿಸಿದ್ದು ಕೆಡಿಪಿ ಸಭೆಯಲ್ಲಿ ಈಗಾಗಲೆ ಶಾಸಕರು ಈ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆ ಉಲ್ಲೇಖಿಸಿದರು.
ಕಳೆದ ಮಳೆಗಾಲದಲ್ಲಿ ಗೊಂದಿಬಸವನಹಳ್ಳಿ ರೊಂಡಕೆರೆ ಏರಿ ಒಡೆದು ಅನಾಹುತ ಸೃಷ್ಠಿಸಿತ್ತು. ಒಡೆದ ಭಾಗವನ್ನು ಈಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ, ಇದಕ್ಕೆ ಶಾಶ್ವತ ಕಾಮಗಾರಿ ಕೈಗೊಳ್ಳುವ ಅಗತ್ಯವಿದೆ ಎಂದು ಸದಸ್ಯ ಎಂ.ಎಂ.ಪ್ರಕಾಶ್ ಹಾಗೂ ಜಿ.ಬಿ.ಜಗದೀಶ್ ಆಗ್ರಹಿಸಿದರು. ಒಡೆದ ಭಾಗದಲ್ಲಿ ಕಾಮಗಾರಿ ಸಂದರ್ಭ ನೀರು ಹರಿಬಿಡಲು ವಾಲ್ ಅಳವಡಿಕೆ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಕುಡಾ ಅಧ್ಯಕ್ಷರಲ್ಲಿ ಆಗ್ರಹಿಸಿದರು. ಈಗಾಗಲೆ ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಗಮನಕ್ಕೆ ತರಲಾಗಿದೆ. ಕೂಡಾ ವ್ಯಾಪ್ತಿಯಲ್ಲಿ ಈ ಕೆರೆ ಬರುವುದಿಲ್ಲ, ಸಣ್ಣ ನೀರಾವರಿ ಇಲಾಖೆಯಲ್ಲಿರುವ ಕೆರೆಗಳ ಪಟ್ಟಿಯಲ್ಲಿ ಕೂಡ ಈ ಕೆರೆಯ ಹೆಸರಿಲ್ಲ. ಕೂಡಾ ವ್ಯಾಪ್ತಿ ವಿಸ್ತರಣೆ ಬಳಿಕ ಕೆರೆ ಒಳಗೊಂಡಲ್ಲಿ ಕುಡಾದಿಂದ ಅಗತ್ಯ ಕ್ರಮವಹಿಸಲಾಗುವುದು ಎಂದು ಕುಡಾ ಅಧ್ಯಕ್ಷರೂ ಆದ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ ತಿಳಿಸಿದರು.
ರೊಂಡಕೆರೆಯಿಂದ ತಾವರೆಕೆರೆಗೆ ಸಂಪರ್ಕಿಸುವ ತೋಡಿಗೆ ಮಣ್ಣು ಹಾಕಲಾಗಿದೆ. ಸರಕಾರಿ ಜಾಗಗಳನ್ನು ಸಂರಕ್ಷಿಸುವ ಕೆಲಸವಾಗಬೇಕಿದೆ ಎಂದು ಸದಸ್ಯರಾದ ಡಿ.ಕೆ.ತಿಮ್ಮಪ್ಪ, ರೇಣುಕಾ, ಜೈವರ್ಧನ್, ಆನಂದಕುಮಾರ್ ಸಭೆಯಲ್ಲಿ ಒತ್ತಾಯಿಸಿದರು.
ಕಡಂಗಗಳು ಒತ್ತುವರಿಯಾಗಿದ್ದ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲು ಕ್ರಮವಹಿಸಲು ಸದಸ್ಯ ಎಂ.ಎಂ.ಪ್ರಕಾಶ್ ಆಗ್ರಹಿಸಿದರು.
ಉಳಿದಂತೆ ಸಂಚಾರ ಸುವ್ಯವಸ್ಥೆ, ಸಾರ್ವಜನಿಕ ಗ್ರಂಥಾಲಯಕ್ಕೆ ನಿವೇಶನ ಒದಗಿಸುವುದು, ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಪುಟ್ಟಲಕ್ಷ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್ ಸೇರಿದಂತೆ ಸದಸ್ಯರು ಇದ್ದರು.
ಬಾಕ್ಸ್: ದಶಕ ಕಳೆದರೂ ಒಳಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಈಗಾಗಲೆ ಜನವರಿಯಲ್ಲಿ ಯೋಜನೆ ಲೋಕಾರ್ಒಣೆಗೊಳಿಸಲು ಶಾಸಕರು ಚಿಂತನೆ ಹರಿಸಿದ್ದರು. ಅದು ಇನ್ನೂ ಕಾರ್ಯರೂಪಕ್ಕೆ ಬಾರದಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. 2012 ರಲ್ಲಿ ಕಾಮಗಾರಿ ಆರಂಭಗೊಂಡರೂ ಇದುವರೆಗೆ ಒಂದೊಂದು ಕಾರಣಗಳು ಹೇಳಿಕೊಂಡು ಮುಂದೂಡಿಕೊಂಡು ಬರುತ್ತಿರುವ ಬಗ್ಗೆ ಸದಸ್ಯರು ಆಕ್ರೋಷ ವ್ಯಕ್ತಪಡಿಸಿದರು. ಕಾವೇರಿ ನದಿಗೆ ಕಲುಷಿತ ತ್ಯಾಜ್ಯ ಸೇರ್ಪಡೆ ಯಾದರೆ ಪುರಸಭೆಗೆ ದಂಡ ವಿಧಿಸಲಾಗುತ್ತದೆ.
ಒಳಚರಂಡಿ ಮಂಡಳಿ ಲೋಪಕ್ಕೆ ಪುರಸಭೆ ಯಾಕೆ ಹೊಣೆಯಾಗಬೇಕು. 40 ಕೋಟಿಯಲ್ಲಿ ಚಾಲನೆಯಾದ ಯೋಜನೆ ವಿಳಂಭದಿಂದ ಮುಂದಿನ ದಿನಗಳಲ್ಲಿ ಯೋಜನೆ ವೆಚ್ಚ 100 ಕೋಟಿಗೂ ತಲುಪಿದರೂ ಅಚ್ಚರಿಯಿಲ್ಲ. ಪುರಸಭೆಗೆ ಬಳಕೆಯಾಗಬೇಕಾದ ಮೊತ್ತ ಯುಜಿಡಿ ಯೋಜನೆಗೆ ವಂತಿಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೆ ಪ್ರಥಮ ಹಂತದಲ್ಲಿ ಹೆದ್ದಾರಿ ಕೆಳಭಾಗದಲ್ಲಿ ಮನೆಮನೆಗಳಿಗೆ ಸಂಪರ್ಕ ಕಲ್ಪಿಸಿ ಯೋಜನೆಗೆ ಚಾಲನೆ ನೀಡಲು ಅಧಿಕಾರಿಯನ್ನು ಆಗ್ರಹಿಸಿದರು. ಶಾಸಕರ ಸಭೆಯಲ್ಲಿ ಉನ್ನತ ಅಧಿಕಾರಿಗಳು ಸಭೆಗೆ ಪಾಲ್ಗೊಳ್ಳಲು ಒತ್ತಾಯಿಸಿದರು.
Back to top button
error: Content is protected !!