ಕಾರ್ಯಕ್ರಮ

ಸಮುದಾಯ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ

ಕುಶಾಲನಗರ, ಜ 04: ವಿಶೇಷಚೇತನರಿಗೆ ಸರಕಾರದ ಸೌಲಭ್ಯಗಳು ತಲುಪಲು ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಹೇಳಿದರು.
ಕೊಡಗು ಜಿಲ್ಲಾ
ವಿಕಲಚೇತನರ ಹಾಗೂ ‌ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಹಾಗೂ ಕುಶಾಲನಗರದ ಶ್ರೀ ಕಾವೇರಿ ಪೋಷಕರ ಸ್ವ ಸಹಾಯ ಸಂಘದ ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಆರಂಭಿಸಿರುವ ಸಮುದಾಯ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಕಲಚೇತನ ಮಕ್ಕಳ ಬಗ್ಗೆ ಪೋಷಕರು ಎಂದಿಗೂ ತಾತ್ಸಾರ ಮನೋಭಾವ ತಾಳಬಾರದು. ಹಲವು ಕಾರಣಗಳಿಂದ ದಿವ್ಯಾಂಗರಾಗಿ ಹುಟ್ಟುವ‌ ಮಕ್ಕಳ ಪಾಲನೆ ಕಷ್ಟಸಾಧ್ಯವಾದರೂ ಕೂಡ
ಅವರ ಬಗ್ಗೆ ಹೆಚ್ಚಿನ ಕಾಳಜಿ ಹೊಂದುವುದು ಅಗತ್ಯವಿದೆ. ಇಂತಹ ಪರಿಸ್ಥಿತಿಗೆ ಒಳಗಾಗಿರುವ ಹಲವರು ಸರಕಾರದ ಮೂಲಕ ದೊರೆಯುವ ಸೌಲಭ್ಯಗಳನ್ನು ಪಡೆಯಲು ಇನ್ನೂ ಮುಂದಾಗಿಲ್ಲ. ಇಂತಹವರನ್ನು ಗುರುತಿಸಿ ಅಗತ್ಯ ಸಹಕಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಮುದಾಯ ಪುನರ್ವಸತಿ ಕೇಂದ್ರದಲ್ಲಿ ದೊರೆಯುವ ಆರೈಕೆಗಳು‌ ಮೂಲಕ ಅವರಿಗೆ ಒಂದಷ್ಟು ಶಕ್ತಿ ತುಂಬುವ ಕೆಲಸವಾಗಲಿದೆ. ಸರಕಾರದಿಂದ ದೊರೆಯುವ ಆರ್ಥಿಕ‌ ನೆರವಿನ ಮಟ್ಟ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನ ಉಪಾಧ್ಯಕ್ಷ ಡಾ.ಚಂದ್ರಶೇಖರ್ ಕೆ.ಎಸ್.ಮಾತನಾಡಿ, ಯೋಜನೆಯ ಬಗ್ಗೆ ಮಾಹಿತಿ ಒದಗಿಸಿದರು.
ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್ ಕೆ.ಎಂ.ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಫಲಾನುಭವಿಗಳಿಗೆ ನೀಡಿದ ವೀಲ್ ಚೇರ್ ಗಳನ್ನು ಶಾಸಕರು ವಿತರಣೆ ಮಾಡಿದರು.
ಶ್ರೀ ಕಾವೇರಿ ಪೋಷಕರ ಸಂಘದ ಪ್ರತಿನಿಧಿ ದಿವ್ಯ ಮುಖೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ‌ನಿರ್ದೇಶಕ ನಟರಾಜು, ಕುಶಾಲನಗರ ರೋಟರಿ ಮುಖ್ಯಸ್ಥ ಎಂ.ಡಿ.ರಂಗಸ್ವಾಮಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ವಿಮಲ‌ ಕೆ.ಜಿ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ‌ ಆರೋಗ್ಯ ವಿಭಾಗ ಮುಖ್ಯಸ್ಥ ಡಾ.ಕುಮಾರ್ ಜಿ.ಎಸ್, ವೈವಿಧ್ಯತೆ ಮತ್ತು ಸೇರ್ಪಡೆ ವಿಭಾಗದ ನಿರ್ದೇಶಕಿ ಎಸ್.ಆರ್.ದೀಪಶ್ರೀ, ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ, ಬೆಂಗಳೂರಿನ ನ್ಯೂ ಸ್ಪೇಸ್ ಇಂಡಿಯಾದ ಮಾನವ ಸಂಪನ್ಮೂಲ ಹಾಗೂ ಆಡಳಿತ ವಿಭಾಗದ ಮುಖ್ಯ ವ್ಯವಸ್ಥಾಪಕಿ ಡಾ.ದೀಪಾಲಿ ಪ್ರಧಾನ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!