ಪರಿಸರ

ಕುಶಾಲನಗರ ಕಾವೇರಿ ಸೇತುವೆ ಕೆಳಭಾಗದಲ್ಲಿ ನದಿ ಸ್ವಚ್ಛತಾ ಕಾರ್ಯಕ್ರಮ

ಕುಶಾಲನಗರ, ಡಿ 29: ನಿರಂತರ ಜಾಗೃತಿಯಿಂದ ಕಾವೇರಿ ನದಿ ಸಂರಕ್ಷಣೆ ಸಾಧ್ಯ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುವ ಬ್ರಿಗೇಡ್ ವತಿಯಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕಾವೇರಿ ನಮನ ಕಾರ್ಯಕ್ರಮ ಅಂಗವಾಗಿ ಭಾನುವಾರ ಕುಶಾಲನಗರ ಕಾವೇರಿ ಸೇತುವೆ ಕೆಳಭಾಗದಲ್ಲಿ ಸಾಂಕೇತಿಕವಾಗಿ ನದಿ ಸ್ವಚ್ಛತಾ ಕಾರ್ಯಕ್ರಮ ನಡೆಸಿ ನಂತರ ಸುದ್ದಿಗಾರರೊಂದಿಗೆ ಅವರು, ಮಾತನಾಡಿದರು.
ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹರಿಯುವ ನದಿ ಕೋಟ್ಯಂತರ ಜನ ಜಾನುವಾರುಗಳಿಗೆ ಹಲವು ರೀತಿಯಲ್ಲಿ ನಿತ್ಯ ಹಾಸು ಹೊಕ್ಕಾಗಿದ್ದು, ಕಾವೇರಿಯನ್ನು ಕಲುಷಿತಗೊಳಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದ ಅವರು, ಇದರ ಪ್ರತಿಫಲವನ್ನು ಮುಂದಿನ ದಿನಗಳಲ್ಲಿ ನಾವುಗಳೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾವೇರಿ ನೀರನ್ನು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸೆಲೆಯಾಗಿ ಬಳಸುತ್ತಿದ್ದು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಮೂಲ ಕಾವೇರಿಯಿಂದ ಜೀವನದಿಯನ್ನು ಸ್ವಚ್ಛ ಶುದ್ಧ ಮಾಡುವ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

ವೃಷಭಾವತಿ ನದಿ ರೀತಿಯಲ್ಲಿ ಕಾವೇರಿ ನದಿಯ ಅವನತಿ ಯಾದಲ್ಲಿ ದಕ್ಷಿಣ ಭಾರತ ಜನತೆ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂದರು.

ಕನ್ನಡತನ ಉಳಿಸುವಲ್ಲಿ ಕನ್ನಡ ನಾಡಿನ ಜೀವನದಿ ಕಾವೇರಿ ಪಾತ್ರ ಮಹತ್ವದ್ದಾಗಿದ್ದು ಕಾವೇರಿ ಉಳಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಮುಂದಾಗಬೇಕಾಗಿದೆ ಈ ಸಂಬಂಧ ಕಾವೇರಿ ಹರಿಯುವ ಭಾಗಗಳಲ್ಲಿ ಯುವ ಬ್ರಿಗೇಡ್ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಹಯೋಗದೊಂದಿಗೆ ಕಾವೇರಿ ನದಿ ದಾರಿ ಉದ್ದಕ್ಕೂ ಜನರಿಗೆ ನದಿ ಸ್ವಚ್ಛತೆ ಬಗ್ಗೆ ಜಾಗೃತಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಮುನ್ನ ನದಿ ತಟದಲ್ಲಿ ಗಿಡಗಳನ್ನು ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕುಶಾಲನಗರದಲ್ಲಿ ಸ್ವಚ್ಛತಾ ಅಭಿಯಾನ ಸಂದರ್ಭ ಯುವ ಬ್ರಿಗೇಡ್ ನ ಪ್ರಮುಖರಾದ ನಂಜನಗೂಡು ಚಂದ್ರಶೇಖರ್, ಧಾರ್ಮಿಕ ವಿಭಾಗದ ಚಂದ್ರಶೇಖರ್, ಸೇರಿದಂತೆ ಬ್ರಿಗೇಡ್ ನ 75ಕ್ಕೂ ಅಧಿಕ ಸ್ವಯಂಸೇವಕರು, ಸ್ಥಳೀಯ ವಾಸವಿ ಯುವಕ ಸಂಘದ ಪ್ರಮುಖರಾದ ವೈಶಾಖ್, ಪ್ರವೀಣ್, ರಾಕೇಶ್, ರವಿಪ್ರಕಾಶ್, ಆದರ್ಶ್ ಹಿಂದೂಪರ ಸಂಘಟನೆ ಪ್ರಮುಖ ನವನೀತ್, ಪವನ್ ಬಿದ್ದಪ್ಪ, ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಎಂ ಎನ್ ಚಂದ್ರಮೋಹನ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ, ಚೈತನ್ಯ, ಸುಮನ ಮಳಲಗದ್ದೆ,
ವಜ್ರಕಾಯ ತಂಡದ ಸದಸ್ಯರು, ಮತ್ತಿತರ ಸಂಘ ಸಂಸ್ಥೆಯ ಪ್ರಮುಖರು ಇದ್ದರು.

ನದಿಯಿಂದ ತೆರವುಗೊಳಿಸಿದ ತ್ಯಾಜ್ಯಗಳನ್ನ ಕುಶಾಲನಗರ ಪುರಸಭೆಯ ಸ್ವಚ್ಛತಾ ವಾಹನಗಳಿಗೆ ತುಂಬಿ ಸಾಗಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!