ಪ್ರಶಸ್ತಿ

ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆ

ಕುಶಾಲನಗರ, ಡಿ 11: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಎರಡು ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ ರಾಜೇಂದ್ರ ಅವರಿಗೆ  ರಾಜ್ಯಮಟ್ಟದ ‘ಡಾ.ಎಚ್ ನರಸಿಂಹಯ್ಯ’ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ವಿಜೇತ ಜಾನಪದ ತಜ್ಞರಾದ ರಾಣಿ ಮಾಚಯ್ಯ ಅವರು ‘ಚೈತನ್ಯ ಸ್ತ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯದಲ್ಲಿ ಜಿಲ್ಲೆಗೊಬ್ಬರಂತೆ ಜೀವಮಾನ ಸಾಧಕರನ್ನು ಗುರುತಿಸಿ ‘ಎಚ್ ಎನ್’ ಪ್ರಶಸ್ತಿ ನೀಡಲಾಗುತ್ತಿದ್ದು ಕೊಡಗು ಜಿಲ್ಲೆಯಲ್ಲಿ  ಹಿರಿಯ ಪತ್ರಕರ್ತರಾದ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ ರಾಜೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ ರಾಜ್ಯ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ತಿಳಿಸಿದ್ದಾರೆ.
ರಾಜ್ಯಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ ಸಾಧನಾ ಪ್ರಶಸ್ತಿ ‘ಚೈತನ್ಯ ಸ್ತ್ರೀ’ ಪ್ರಶಸ್ತಿ ಕೊಡಗು ಜಿಲ್ಲೆಯ ರಾಣಿ ಮಾಚಯ್ಯ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನ ಡಿಸೆಂಬರ್ 28 ಮತ್ತು 29ರಂದು ಬೆಂಗಳೂರು ಯಲಹಂಕ ತಾಲೂಕು ಬಾಗಲೂರು ವಿ ಜೆ ಇಂಟರ್ನ್ಯಾಷನಲ್ ಶಾಲಾ ಮೈದಾನದಲ್ಲಿ ನಡೆಯಲಿದ್ದು ಡಿಸೆಂಬರ್ 29ರಂದು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ  ವನಿತಾಚಂದ್ರಮೋಹನ್ ತಿಳಿಸಿದ್ದಾರೆ.
ಎರಡು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಚಿಂತನಗೋಷ್ಠಿಗಳು, ಸಾಂಸ್ಕೃತಿಕ ವೈಭವ,  ವಿಜ್ಞಾನ ವಸ್ತುಪ್ರದರ್ಶನ ಮತ್ತು ಪ್ರಶಸ್ತಿ ಪ್ರಧಾನ ಮತ್ತಿತರ ಕಾರ್ಯಕ್ರಮಗಳು  ನಡೆಯಲಿದೆ.
ಖ್ಯಾತ ಚಲನಚಿತ್ರ ನಟಿ ಉಮಾಶ್ರೀ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನವನ್ನು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು ಮಾಜಿ ಮುಖ್ಯಮಂತ್ರಿಗಳು, ಸಚಿವರು, ಸಂಸದರು,  ವಿಜ್ಞಾನಿಗಳು, ಗಣ್ಯ ಚಿಂತಕರು, ಸಾಹಿತಿಗಳು, ಚಲನಚಿತ್ರನಟರು ಸೇರಿದಂತೆ ಪರಿಷತ್ತಿನ 5 ಸಾವಿರಕ್ಕೂ ಮಿಕ್ಕಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!