ಕಾಮಗಾರಿ

ದುಬಾರೆಯಲ್ಲಿ 39 ಲಕ್ಷ ವೆಚ್ಚದ ಹೈಟೆಕ್ ಶೌಚಾಲಯ ಉದ್ಘಾಟನೆ

ಕುಶಾಲನಗರ, ಡಿ 03: ಮುಂದಿನ ಮಳೆಗಾಲದ ಒಳಗಾಗಿ ದುಬಾರೆ ಕಾವೇರಿ ‌ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣವಾಗಲಿದೆ ಎಂದು‌ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ತಿಳಿಸಿದರು.
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ
ದುಬಾರೆಯಲ್ಲಿ ಜಿಲ್ಲಾಡಳಿತ, ಅರಣ್ಯ, ಪ್ರವಾಸೋದ್ಯಮ ಇಲಾಖೆ, ನಂಜರಾಯಪಟ್ಟಣ ಗ್ರಾಪಂ ಹಾಗೂ ರಿವರ್ ರಾಫ್ಟಿಂಗ್ ಸಮಿತಿ ವತಿಯಿಂದ ರೂ 39 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರವಾಸೋದ್ಯಮ
ಅಭಿವೃದ್ಧಿಗೆ ಹೆಚ್ಚಿನ ಒತ್ತು‌ ನೀಡಲಾಗುತ್ತಿದೆ. ದುಬಾರೆಯಲ್ಲಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಈಗಾಗಲೆ ಕಾರ್ಯೋನ್ಮುಖವಾಗಿದ್ದು
7.12 ಕೋಟಿ ಮೊತ್ತದ ಡಿಪಿಆರ್ ಸಿದ್ದಗೊಳಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಪ್ರಗತಿ ಹಂತದಲ್ಲಿದೆ. ಮುಂದಿನ ಮಳೆಗಾಲದ ಒಳಗಾಗಿ ಇಲ್ಲಿ ತೂಗು ಸೇತುವೆ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯ ಸಂಪೂರ್ಣ ಪ್ರವಾಸಿ ತಾಣಗಳ ಮಾಹಿತಿ ಒಳಗೊಂಡ ವೆಬ್ ಸೈಟ್ ಕೂಡ ಪ್ರವಾಸೋದ್ಯಮ ಇಲಾಖೆಯಿಂದ ಸಿದ್ದಗೊಂಡಿದ್ದು ಶೀಘ್ರದಲ್ಲಿಯೇ ಲೋಕಾರ್ಪಣೆಗೊಳಿಸಲಾಗುವುದು.
ಪ್ರವಾಸಿಗರ ಅನುಕೂಲಕ್ಕಾಗಿ ಹೈಟೆಕ್ ಶೌಚಾಲಯ ನಿರ್ಮಿಸಿದ್ದು ವಿಕಲಚೇತನರಿಗೆ ಅನುಕೂಲ ಕಲ್ಪಿಸಲಾಗಿದೆ. ಶೌಚಾಲಯ ತ್ಯಾಜ್ಯ ನದಿಗೆ ಸೇರದಂತೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ವಿದೇಶಗಳಿಗೆ ಹೋಲಿಸಿದರೆ ನಾವು ತುಂಬಾ ಹಿಂದುಳಿದಿದ್ದು, ಶೌಚಾಲಯಗಳಿಗೆ ಅಗತ್ಯ ಸೈನ್ ಬೋರ್ಡ್ ಅಳವಡಿಕೆ, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಸೂಚಿಸಿದರು.

ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಮಡಿಕೇರಿ ಕ್ಷೇತ್ರದಲ್ಲಿ ಶೂನ್ಯ ಬೇಡಿಕೆಗಳ ಗುರಿ ನಿಟ್ಟಿನಲ್ಲಿ ನೂತನ ಶಾಸಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಎಲ್ಲರ ಅಹವಾಲನ್ನು ಆಲಿಸಿ ಅಗತ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಮುತುವರ್ಜಿ ವಹಿಸುತ್ತಿದ್ದಾರೆ. ಅಭಿವೃದ್ಧಿ ಪರ ವ್ಯಕ್ತಿಗೆ ಮತದಾರರು ಸದಾ ಸಹಕಾರ ನೀಡಬೇಕಿದೆ ಎಂದರು.
ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ಕಾಡಾನೆ ಹಾವಳಿ ನಿಯಂತ್ರಣ, ಹಕ್ಕುಪತ್ರ ವಂಚಿತ ಫಲಾನುಭವಿಗಳಿಗೆ ಸೌಲಭ್ಯ
ವಿತರಣೆ ಸೇರಿದಂತೆ
ಗ್ರಾಪಂ ವ್ಯಾಪ್ತಿಗೆ ಅಗತ್ಯವಿರುವ ವಿಚಾರಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರು.
ಪ್ರವಾಸೋದ್ಯಮ‌ ಇಲಾಖೆ ಅಧಿಕಾರಿ ಅನಿತಾ ಭಾಸ್ಕರ್ ಮಾತನಾಡಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸುಮಾ, ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ರಿವರ್ ರಾಫ್ಟಿಂಗ್ ಸಮಿತಿ ಸದಸ್ಯ ವಸಂತ, ಗ್ರಾಪಂ ಸದಸ್ಯರಾದ ಸಮೀರಾ, ಲೋಕನಾಥ್, ಗಿರಿಜಮ್ಮ, ಮಾಜಿ ಸದಸ್ಯ ಪ್ರೇಮಾನಂದ, ಲೋಕೋಪಯೋಗಿ ಇಲಾಖೆ ಅಭಿಯಂತರ ಅರ್ಬಾಜ್ ಅಹಮ್ಮದ್, ಗುತ್ತಿಗೆದಾರ ಮಧು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!