ಪ್ರಕಟಣೆ

ಕೊಡಗು ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷರಾಗಿ ದೀಪಾ ಆಯ್ಕೆ

ಕುಶಾಲನಗರ, ಡಿ 02: ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಕುಶಾಲನಗರದ ದೀಪಾ ಕರುಣ್ ಆಯ್ಕೆಯಾಗಿದ್ದಾರೆ.

ನಿಯೋಜಿತ ಅಧ್ಯಕ್ಷೆ ದೀಪಾ ಅವರನ್ನು ಕುಶಾಲನಗರದ ಅಕ್ಕನ ಬಳಗದ ಮಹಿಳಾ ಸದಸ್ಯರು ಸ್ಥಳೀಯ ಬಸವೇಶ್ವರ ದೇವಾಲಯದಲ್ಲಿ ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭ ಮಾತನಾಡಿದ ಅಕ್ಕನ ಬಳಗದ ಮಾಜಿ ಅಧ್ಯಕ್ಷರೂ, ಹಿರಿಯರೂ ಆದ ವಿಜಯಪಾಲಾಕ್ಷ, ಕೊಡಗಿನ ರಾಜ ಮನೆತನ ಸತತವಾಗಿ 200 ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದ್ದರು.
ಆದರೆ ಇಂದು ಜಿಲ್ಲೆಯಲ್ಲಿ ವೀರಶೈವ ಸಮಾಜಕ್ಕೆ ಭದ್ರವಾದ ಬುನಾದಿಯೇ ಇಲ್ಲವಾಗಿದೆ.
ಜಿಲ್ಲಾ ಕೇಂದ್ರವಾಗಲೀ, ಯಾವುದೇ ತಾಲ್ಲೂಕು ಕೇಂದ್ರಗಳಲ್ಲಿ ಆಗಲೀ, ವೀರಶೈವ ಸಮಾಜವನ್ನು ಪ್ರತಿನಿಧಿಸುವ ಒಂದೇ ಒಂದು ಭವನಗಳಿಲ್ಲ.
ಈಗ ಇರುವ ಅಖಿಲ ಭಾರತ ವೀರಶೈವ ಜಿಲ್ಲಾ ಘಟಕ ಜಿಲ್ಲೆಯಾದ್ಯಂತ ವೀರಶೈವ ಸಮಾಜವನ್ನು ಸಂಘಟಿಸಬೇಕು. ಆ ಮೂಲಕ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬಸವ ಭವನಗಳ ನಿರ್ಮಾಣ ಮಾಡುವತ್ತ ಶಪಥ ಮಾಡಬೇಕೆಂದು ಕರೆಕೊಟ್ಟರು.
ಕುಶಾಲನಗರ ಪಟ್ಟಣದಲ್ಲಿ 350 ಕ್ಕೂ ಹೆಚ್ಚು ವೀರಶೈವ ಸಮಾಜದ ಕುಟುಂಬಗಳಿದ್ದೂ ಒಂದೆಡೆ ಸೇರಲು ಸ್ಥಳಾವಕಾಶವಿಲ್ಲ. ಇದ್ದ ಬಸವೇಶ್ವರ ದೇವಾಲಯವನ್ನು ಹೆದ್ದಾರಿ ವಿಸ್ತರಣೆಗೆಂದು ಒಡೆದು ಹಾಕಲಾಗಿದೆ. ಇದೀಗ ಭಕ್ತ ಜನರು ಕೂರಲು ಕೂಡ ದೇಚಾಲಯದ ಆವರಣದಲ್ಲಿ ಜಾಗವಿಲ್ಲವಾಗಿದೆ. ಆದ್ದರಿಂದ ಸಮಾಜದ ಪದಾಧಿಕಾರಿಗಳು ಸಮಾಜ ಹಾಗೂ ಸಮುದಾಯದ ಅಭಿವೃದ್ದಿಗೆ ಶ್ರಮಿಸಬೇಕೆಂದು ವಿಜಯ ಪಾಲಾಕ್ಷ ಕರೆಕೊಟ್ಟರು.
ಈ ಸಂದರ್ಭ ಕುಶಾಲನಗರ ಕದಳಿ ವೇದಿಕೆಯ ನಿಯೋಜಿತ ಅಧ್ಯಕ್ಷೆ ಬಿ.ಬಿ.ಹೇಮಲತಾ, ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ, ಕೋಶಾಧಿಕಾರಿ ಜಿ.ಎಸ್.ವೇದಾವತಿ ಮೂರ್ತಿ, ಪ್ರಮುಖರಾದ ಮನುದೇವಿ, ಬೇಬಿ, ಸೌಭಾಗ್ಯ, ಮಣಿಶಿವಣ್ಣ,ಲಕ್ಷ್ಮಿಪಲ್ಲೇದ್ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!