ಟ್ರೆಂಡಿಂಗ್
507 ಶಾಲೆಗಳಿಗೆ 2.74 ಕೋ.ಮೊತ್ತದ 4,044 ಜೊತೆ ಡೆಸ್ಕ್-ಬೆಂಚು ವಿತರಿಸಿದ ಡಾ|| ಡಿ.ವೀರೇಂದ್ರ ಹೆಗ್ಗಡೆ
ಕುಶಾಲನಗರ, ನ 13:ರಾಜ್ಯದಲ್ಲಿ ಸರಕಾರಿ ಶಾಲೆಗಳು ಇಂದು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಶಿಕ್ಷಕರ ಕೊರತೆ ಕಾಡುತ್ತಿದೆ. ಈ ನೆಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳು ಭರ್ತಿಯಾದಲ್ಲಿ ಮತ್ತಷ್ಟು ಉತ್ತಮ ಶಿಕ್ಷಣ ನೀಡಲು ಸಾಧ್ಯವೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ರಾಜ್ಯದ ದ.ಕ., ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ತಾಲೂಕುಗಳ 507 ಶಾಲೆಗಳಿಗೆ ಒಟ್ಟು 2.74 ಕೋಟಿ ಮೊತ್ತದ 4044 ಜೊತೆ ಡೆಸ್ಟ್- ಬೆಂಚು ವಿತರಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಎಲ್ಲಾ ಮೂಲಸೌಕರ್ಯಗಳೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಾಗಾಗಿ ಸರಕಾರಿ ಶಾಲೆಗಳು ಉಳಿಯಲು ದಾಖಲಾತಿ ಹೆಚ್ಚಿಸುವಲ್ಲಿ ಪೋಷಕರು ಗಮನ ವಹಿಸಿ ಸರಕಾರದ ಸವಲತ್ತು ಸುದುಪಯೋಗಪಡಿಸಿಕೊಂಡು ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಶಿಕ್ಷಕರ ಹುದ್ದೆಗಳನ್ನು ಸರಕಾರ ಭರ್ತಿ ಮಾಡಿದಲ್ಲಿ ಹೆಚ್ಚು ಸರಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, ಪ್ರಸಕ್ತ ವರ್ಷ 1,030 ಜ್ಞಾನದೀಪ ಅತಿಥಿ ಶಿಕ್ಷಕರನ್ನು ಸರಕಾರಿ ಶಾಲೆಗಳಲ್ಲಿ ನೇಮಿಸಲಾಗಿದೆ. ಕಳೆದ ವರ್ಷ 45 ಸಾವಿರ, ಪ್ರಸಕ್ತ ವರ್ಷ 65 ಸಾವಿರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಗಿದೆ ಎಂದು ತಿಳಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ದ.ಕ.ಜಿಲ್ಲಾ ಉಪ ನಿರ್ದೇಶಕ ವೆಂಕಟೇಶ್ ಸುಬ್ರಾಯ ಪಟಗಾರ್ ಮಾತನಾಡಿ, ಧರ್ಮಸ್ಥಳದ ಕೊಡುಗೆಯಿಂದಾಗಿ ಜಿಲ್ಲೆಯಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಹೇಮಾವತಿ ವೀ. ಹೆಗ್ಗಡೆ, ದ.ಕ. ಜಿ.ಪಂ. ಸಿಇಒ ಆನಂದ ಕೆ.. ತಾ.ಪಂ. ಇಒ ಭವಾನಿಶಂಕರ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ತುಳುಪುಳೆ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ವಿಮಲಾ ಉಪಸ್ಥಿತರಿದ್ದರು.
ಧ.ಗ್ರಾ.ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಪ್ರಾಸ್ತಾವಿಸಿ, ಸ್ವಾಗತಿಸಿದರು. ನಿರ್ದೇಶಕ ಶಿವಾನಂದ ಆಚಾರ್ಯ ನಿರೂಪಿಸಿದರು.
ದ.ಕ.ಜಿಲ್ಲೆಯೊಂದಕ್ಕೇ 2,000 ಜತೆ ಬೆಂಚು-ಡೆಸ್ಕ್ ವಿತರಣೆ.
ರಾಜ್ಯದ ಶಾಲೆಗಳಿಗೆ ಮೂಲಸೌಕರ್ಯ ಅಭಿವಧಿಗೆ ಕ್ಷೇತ್ರದಿಂದ ಈವರೆಗೆ 38.01 ಕೋಟಿ ರೂ. ವಿನಿಯೋಗ
ರಾಜ್ಯದ ಒಟ್ಟು 11,000 ಶಾಲೆಗಳಿಗೆ ಈವರೆಗೆ 26 ಕೋಟಿ ರೂ. ವೆಚ್ಚದಲ್ಲಿ 72,000 ಜತೆ ಬೆಂಚು-ಡೆಸ್ಕ್ ವಿತರಣೆ ನಡೆದಿದೆ. 98 ಶಾಲೆಗಳಿಗೆ 850 ಕಿಟ್ ವಿತರಿಸಲಾಗಿದೆ.