ಸಾಹಿತ್ಯ

ಕವಿ ಹಾ.ತಿ.ಜಯಪ್ರಕಾಶ್ ವಿರಚಿತ ಹನಿ ಕವನಗಳ ಸಂಕಲನ ‘ಹನಿ’ ಲೋಕಾರ್ಪಣೆ

ಕುಶಾಲನಗರ, ಅ 27: ಕುಶಾಲನಗರದ ಚುಟುಕು ಕವಿ ಹಾ.ತಿ.ಜಯಪ್ರಕಾಶ್ ವಿರಚಿತ ಹನಿ ಕವನಗಳ ಸಂಕಲನ ‘ಹನಿ’ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಗುಮ್ಮನಕೊಲ್ಲಿ-ಹಾರಂಗಿ ರಸ್ತೆಯ ವರವರದ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಖ್ಯಾತ ಕವಿ ಬಿ.ಆರ್.ಲಕ್ಷ್ಮಣರಾವ್ ಅವರು ಉದ್ಘಾಟಿಸಿ, ಕವನ ಸಂಕಲನ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಹನಿಗವಿತೆಗಳು ಸಾಮಾನ್ಯರ‌ ಕವಿತೆ. ಸಾಮಾನ್ಯರು ಕೂಡ ಹನಿಗವಿತೆಗಳನ್ನು ರಚಿಸಬಹುದಾದ ಪ್ರಕಾರವಾಗಿದೆ. ಇಂದಿನ ಆಧುನಿಕ, ಧಾವಂತದ ಕಾಲಘಟ್ಟದಲ್ಲಿ ದಿಢೀರ್ ಕಾವ್ಯ ರಚನೆಯಿಂದ ಕೆಲವೊಮ್ಮೆ ಗುಣಮಟ್ಟದ ಕೊರತೆ ಎದುರಾಗದಂತೆ ಎಚ್ಚರವಹಿಸಬೇಕಿದೆ.
ಆತ್ಮ ತೃಪ್ತಿಗಾಗಿ, ಸಂತೋಷಕ್ಕಾಗಿ ಕೆಲವರು ಕವಿತೆ ರಚಿಸಿದರೆ, ಸಾಮಾಜಿಕ ತುಡಿತ, ವಿಶ್ಲೇಷಣೆ, ವಿಡಂಬನೆ, ನೋವುಗಳನ್ನು ವ್ಯಕ್ತಪಡಿಸುವ ಸಾಧನವಾಗಿ ಕೂಡ ಹನಿಗವಿತೆಗಳು ಹೆಚ್ಚು ಪ್ರಚಲಿತವಾಗಿದೆ ಎಂದರು.
ಸಾಹಿತ್ಯವನ್ನು ಆಸ್ವಾದಿಸುವ, ಕವನಗಳನ್ನು ಆನಂದಿಸುವ ಪ್ರತಿಯೊಬ್ಬರಲ್ಲೂ ಕೂಡ ಒಬ್ಬ ಕವಿ ಅಡಗಿರುತ್ತಾನೆ ಎಂದು ಅವರು ಬಣ್ಣಿಸಿದರು. ಕವಿಗಳು, ಸಾಹಿತಿಗಳಿಗೆ ವೈಯಕ್ತಿಕವಾಗಿ ಯಾವುದೇ ಲಾಭ ದೊರೆಯದಿದ್ದರೂ ಕೂಡ ಅಪಾರ ಅಭಿಮಾನಿಗಳನ್ನು ಹೊಂದಲು ಸಾಧ್ಯವಾಗಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಾ.ತಿ.ಜಯಪ್ರಕಾಶ್, ಉದ್ಯೋಗ ಅರಸಿ ಮೈಸೂರಿಗೆ ತೆರಳಿ‌ ಬರಿಗೈಯಲ್ಲಿ‌ ಮಡಿಕೇರಿಗೆ ಕಾಲ್ನಡಿಯಲ್ಲಿ ಬಂದ ದಿನಗಳಲ್ಲಿ ಕವಿತೆ ಗೀಚುವ ಆಲೋಚನೆ ಮೂಡಿತು. ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಗೊಂಡು ಅದಕ್ಕೆ‌ ಬಹುಮಾನ ಬಂದ ನಂತರ ಸಮಯ ಸಿಕ್ಕಾಗೆಲ್ಲಾ ಕವಿತೆ ಗೀಚುವ ಹವ್ಯಾಸ ಬೆಳೆಸಿಕೊಂಡೆ. ಇದು ಹಲವು‌ ಬಾರಿ ನನ್ನ ವೃತ್ತಿಯಲ್ಲಿ ವರ್ಗಾವಣೆಗೂ ಕೂಡ‌ ಕಾರಣವಾಯಿತು. ನನ್ನ ಕವನಗಳನ್ನು ಪ್ರಕಟಿಸುವ ಆಲೋಚನೆ ಮಾಡದಿದ್ದರೂ ಕೂಡ ಇದೀಗ ವಾರ್ತಾ ಕಮ್ಯುನಿಕೇಷನ್ ಸಂಸ್ಥೆಯ ಒತ್ತಡದಿಂದ ಆಯ್ದ ಕವಿತೆಗಳ ಸಂಕಲನ ಹೊರತರಲಾಗಿದೆ ಎಂದು ತಿಳಿಸಿದರು.

ವಾರ್ತಾ ಕಮ್ಯುನಿಕೇಷನ್ ಸಂಸ್ಥೆ ಪ್ರಮುಖ ಅನಿಲ್ ಹೆಚ್.ಟಿ ಸರ್ವರನ್ನು ಸ್ವಾಗತಿಸಿ, ಕವಿ ಬಿ.ಆರ್.ಲಕ್ಷ್ಮಣರಾವ್ ಅವರ ಪರಿಚಯ ಮಾಡಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಕಸಾಪ ಮಾಜಿ‌‌ ಜಿಲ್ಲಾಧ್ಯಕ್ಷ
ಟಿ.ಪಿ.ರಮೇಶ್, ತ್ರಿಭಾಷಾ ಸಾಹಿತಿ
ನಾಗೇಶ್ ಕಾಲೂರು, ಹಾ.ತಿ ಜಯಪ್ರಕಾಶ್ ಪತ್ನಿ
ಜಯಲಕ್ಷ್ಮಿ ಸೇರಿದಂತೆ ಕೊಡಗಿನ ವಿವಿಧೆಡೆಗಳಿಂದ ಕವಿ ಹಾಗೂ ಸಾಹಿತಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಕವಿ ಲಕ್ಷ್ಮಣರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!